ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಕಾಡಿತ್ತಾ ಭಯ? – ಪ್ರಧಾನಿ ಮೋದಿಯವರೇ ಮಂಗಳೂರಿಗೆ ಬಂದು ಪ್ರಚಾರ ಮಾಡಿದ್ದು ಇದಕ್ಕೇನಾ?

ಬೇಸಿಗೆಯ ಬಿಸಿ ನಡುವೆಯೂ ಕರಾವಳಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆ ಕಾವು ತೀವ್ರಗೊಂಡಿದೆ. ಅದ್ರಲ್ಲೂ ಹಿಂದುತ್ವದ ನೆಲೆ, ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಸಿಕೊಳ್ಳೋ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆಯದ್ದೇ ಲೆಕ್ಕಾಚಾರ ಓಡ್ತಿದೆ. ಇಷ್ಟು ದಿನ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದ್ರೂ ನಿರಾಯಾಸವಾಗಿ ಗೆಲ್ತಾರೆ ಅನ್ನೋ ಅಭಿಪ್ರಾಯವಿತ್ತು. ಆದರೆ, ಈ ಬಾರಿಯ ಚಿತ್ರಣ ಬದಲಾಗಿದ್ದು, ಬಿಜೆಪಿಯಲ್ಲೇ ಭೀತಿ ಹುಟ್ಟಿಸಿದೆ. ಇದೇ ಕಾರಣಕ್ಕೆ ಬಿಡುವಿಲ್ಲದ ಪ್ರವಾಸದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರೇ ಮಂಗಳೂರಿಗೆ ಬಂದು ಪ್ರಚಾರ ಮಾಡುವುದು ಅನಿವಾರ್ಯವಾಯಿತು ಎಂಬ ವಿಶ್ಲೇಷಣೆ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ಒಂದೊಂದು ಪ್ರಚಾರ ಸಭೆಯೂ ಬಿಜೆಪಿ ಪಾಲಿಗೆ ತುಂಬಾನೇ ಇಂಪಾರ್ಟೆಂಟ್.. ಎಲ್ಲೆಲ್ಲಿ ಅಭ್ಯರ್ಥಿಗಳಿಗೆ ಗೆಲುವು ಸ್ವಲ್ಪ ಕಷ್ಟ ಆಗ್ಬೋದು ಅನ್ನಿಸುತ್ತೋ ಅಲ್ಲಿ ಮಾತ್ರ ಮೋದಿ ನೇತೃತ್ವದ ರಾಲಿ ನಡೆಸಬೇಕೆಂದು ಪಕ್ಷ ನಿರ್ಧರಿಸಿದೆ. ಆದ್ರೂ ಈ ಪಟ್ಟಿಯಲ್ಲಿ ಮಂಗಳೂರು ಕೂಡ ಇತ್ತು ಎಂದರೆ ಅಚ್ಚರಿಯಾಗಬಹುದು. ಅದಕ್ಕೆ ಕಾರಣವೂ ಇದೆ.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ರಾಹುಲ್ ಗಾಂಧಿ ಮತಶಿಕಾರಿ – ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಯಾಗಿತ್ತು. ಯಾಕಂದ್ರೆ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದ ಅರುಣ್ಕುಮಾರ್ ಪುತ್ತಿಲ ಪರಿವಾರ ಬಿರುಗಾಳಿ ಎಬ್ಬಿಸಿದ್ದರಿಂದ ಅದರ ಲಾಭ ಕಾಂಗ್ರೆಸ್ಗೆ ಆಯ್ತು. ಬಿಜೆಪಿ ಅಭ್ಯರ್ಥಿ ಮತ್ತು ಪುತ್ತಿಲ ಕಿತ್ತಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರು. ಇದೇ ಗೊಂದಲ ಲೋಕಸಭೆ ಚುನಾವಣೆವರೆಗೂ ಮುಂದುವರಿದುಕೊಂಡು ಬಂದಿದೆ. ಹಿಂದೆಲ್ಲಾ ಗೆಲ್ಲುತ್ತಿದ್ದ ಹಾಗೇ ಈ ಬಾರಿ ಭರ್ಜರಿ ಅಂತರದ ಗೆಲುವು ಕಷ್ಟವಾಗಬಹುದು ಎಂಬ ಚಿಂತೆ ಸಂಘ ಪರಿವಾರಕ್ಕೂ ಕಾಡುತ್ತಿದೆ. ಹೀಗಾಗೇ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಅಲೆ ಸೃಷ್ಟಿಯಾಗಬೇಕು ಅಂದ್ರೆ ಪ್ರಧಾನಿ ಮೋದಿ ಬರಲೇಬೇಕು ಎಂದು ಪಕ್ಷದಿಂದಲೂ ಒತ್ತಡ ತರಲಾಯಿತು ಎನ್ನಲಾಗಿದೆ. ಅಲ್ದೇ ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಕೂಡ ಕಮಾಲ್ ಶುರು ಮಾಡಿದೆ. ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಕ್ಷೇತ್ರದಾದ್ಯಂತ ಭರ್ಜರಿ ಪ್ರವಾಸ ಮಾಡ್ತಿದ್ದಾರೆ. ಉಡುಪಿ-ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಬಗ್ಗೆಯೂ ಒಳ್ಳೆಯ ಅಭಿಪ್ರಾಯವಿದೆ. ಈ ಹಿಂದಿನಿಂದ್ಲೂ ಈ ಎರಡೂ ಕ್ಷೇತ್ರಗಳಲ್ಲಿ ಹಿಂದುತ್ವದ ಆಧಾರದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಲೇ ಬಂದಿದೆ. ಆದರೆ, ಈ ಸಲ ಜಾತಿ ವಿಚಾರವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ. ಇದರಿಂದ ಹಿಂದೂಗಳ ಮತ ವಿಭಜನೆಯಾದರೆ ಅನುಕೂಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಹಾಗೇನಾದ್ರೂ ಕಾಂಗ್ರೆಸ್ ಪ್ಲ್ಯಾನ್ ವರ್ಕೌಟ್ ಆದ್ರೆ ಬಿಜೆಪಿಗೆ ದೊಡ್ಡ ಲಾಸ್ ಆಗಲಿದೆ. ಇದೇ ಕಾರಣಕ್ಕೆ ಮೋದಿ ಅವರನ್ನೇ ಕರೆಸಿ ರೋಡ್ಶೋ ನಡೆಸಲಾಯಿತು ಎಂದು ಬಿಜೆಪಿ ಮೂಲಗಳೇ ತಿಳಿಸಿವೆ.
1991 ರ ಲೋಕಸಭಾ ಚುನಾವಣೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವು ಅಜೇಯವಾಗಿ ಉಳಿದಿರುವ ಕಾರಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ. ಮೂರು ಬಾರಿ ಸಂಸದರಾಗಿದ್ದ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹೊಸ ಮುಖ ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ನೀಡಲಾಗಿದೆ. ಕಾಂಗ್ರೆಸ್ನ ಪದ್ಮರಾಜ್ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.