ಪಂಚಾಯತಿ ಕಚೇರಿಯಲ್ಲೇ ಡಬಲ್ ಮ*ರ್ಡರ್! ತಂದೆ-ಮಗಳು ಬರ್ಬರ ಹ*ತ್ಯೆ

ಪಂಚಾಯತಿ ಕಚೇರಿಯಲ್ಲೇ ಡಬಲ್ ಮ*ರ್ಡರ್! ತಂದೆ-ಮಗಳು ಬರ್ಬರ ಹ*ತ್ಯೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಚೇರಿಯಲ್ಲೇ ತಂದೆ ಮತ್ತು ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಆಸ್ತಿ ಪಾಲು ಮಾಡಲು ಅರ್ಜಿ ಸಲ್ಲಿಸುವ ಉದ್ದೇಶದಿಂದ ಗ್ರಾಮ ಪಂಚಾಯತಿ ಕಚೇರಿಗೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹತ್ಯೆಯಾದವರನ್ನು ಮಾಜಿ ಯೋಧ ರುದ್ರಪ್ಪ ಕುಂದರಗಿ, 67 ವರ್ಷ, ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ, 26 ವರ್ಷ ಎಂದು ಗುರುತಿಸಲಾಗಿದೆ. ತಂದೆ-ಮಗಳು ಇಬ್ಬರೂ ಪಂಚಾಯತಿ ಕಚೇರಿಗೆ ಬಂದಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಮತ್ತೆ ಸೋಲುಣಿಸಿದ ಶ್ರೇಯಸ್ ಪಡೆ! – 2-0 ಸರಣಿ ಗೆದ್ದ ಟೀಂ ಇಂಡಿಯಾ

ತಂದೆ ಮತ್ತು ಮಗಳ ಹತ್ಯೆಗೆ ನಿಖರ ಕಾರಣವೇನು? ಆಸ್ತಿ ವಿಚಾರವೇ ಈ ಕೃತ್ಯಕ್ಕೆ ಕಾರಣವಾಗಿತ್ತೇ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಅವರಾದಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರ ತನಿಖೆಯಿಂದಲೇ ಹತ್ಯೆಯ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕಿದೆ.

Kishor KV

Leave a Reply

Your email address will not be published. Required fields are marked *