ಅಮೆರಿಕದಲ್ಲಿ ʼಮಾಂಸ ತಿನ್ನುವ ಬ್ಯಾಕ್ಟೀರಿಯಾʼ ಪತ್ತೆ! – ಮಹಾಮಾರಿಗೆ ಎಂಟು ಮಂದಿ ಬಲಿ  

ಅಮೆರಿಕದಲ್ಲಿ ʼಮಾಂಸ ತಿನ್ನುವ ಬ್ಯಾಕ್ಟೀರಿಯಾʼ ಪತ್ತೆ! – ಮಹಾಮಾರಿಗೆ ಎಂಟು ಮಂದಿ ಬಲಿ  

ನವದೆಹಲಿ: ಅಮೆರಿಕದಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾವೊಂದು ಪತ್ತೆಯಾಗಿದೆ. ಈ ಮಹಾಮಾರಿ ಈವರೆಗೆ ಎಂಟು ಮಂದಿಯನ್ನು ಬಲಿತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಅಮೆರಿಕದ 2 ರಾಜ್ಯಗಳಾದ ಕನೆಕ್ಟಿಕಟ್ ಮತ್ತು ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪೈಕಿ ಒಬ್ಬ ವ್ಯಕ್ತಿ, ಬ್ಯಾಕ್ಟೀರಿಯಾ ದಾಳಿಗೆ ತುತ್ತಾದ ಒಂದೇ ದಿನದಲ್ಲಿ ಸಾವು ಕಂಡಿದ್ದಾರೆ.  ಈ ಬ್ಯಾಕ್ಟೀರಿಯಾ ಬೀಚ್‌ನಲ್ಲಿ ಈಜುವ ವೇಳೆ ತುತ್ತಾಗಿದ್ದರೆ, ಇನ್ನೊಬ್ಬ ವ್ಯಕ್ತಿ ಹಸಿಯಾದ ಓಯೆಸ್ಟರ್‌ ತಿಂದ ಪರಿಣಾಮವಾಗಿ ಈ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದವರಿಗೆ ಈ ಬ್ಯಾಕ್ಟೀರಿಯಾ ಹೇಗೆ ತುತ್ತಾಗಿದೆ ಎಂದು ಈವರೆಗೆ ತಿಳಿದುಬಂದಿಲ್ಲ.

ಈ ಬ್ಯಾಕ್ಟೀರಿಯಾವನ್ನು ‘ವಿಬ್ರಿಯೊ ವಲ್ನಿಫಿಕಸ್’ ಎಂದು ಗುರುತಿಸಲಾಗಿದ್ದು, ಇದು ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾವಾಗಿದೆ ಎಂದು ಕನೆಕ್ಟಿಕಟ್‌ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕನೆಕ್ಟಿಕಟ್‌ನ ಆರೋಗ್ಯ ಇಲಾಖೆಯು ಈಗಾಗಲೇ ಅಲ್ಲಿನ ಜನರಿಗೆ ಸಮುದ್ರಕ್ಕೆ ಇಳಿಯದಂತೆ ಜನರಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಹಸಿಯಾದ ಓಯೆಸ್ಟರ್‌ ತಿನ್ನುವುದನ್ನು ಸಹ ನಿಷೇಧಿಸಲಾಗಿದೆ.

ಇದನ್ನೂ ಓದಿ: ಚಂದ್ರಯಾನ -3 ಯಶಸ್ಸಿಗಾಗಿ ನಾಗರ ಪಂಚಮಿಯಂದು ಕುಕ್ಕೆ ಸುಬ್ಯಹ್ಮಣ್ಯದಲ್ಲಿ ವಿಶೇಷ ಪೂಜೆ

ಅಮೆರಿಕದ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್’ ಪ್ರಕಾರ, ವೈಜ್ಞಾನಿಕ ಭಾಷೆಯಲ್ಲಿ ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾವನ್ನು ‘ನೆಕ್ರೋಟೈಸಿಂಗ್ ಫ್ಯಾಸಿಟಿಸ್’ ಎಂದು ಕರೆಯಲಾಗುತ್ತದೆ. ವಿಬ್ರಿಯೊ ವಲ್ನಿಫಿಕಸ್ ಹೆಸರಿನ ಬ್ಯಾಕ್ಟೀರಿಯಾದಿಂದಲೂ ಇಂತಹ ಸೋಂಕುಗಳು ಅನೇಕ ಬಾರಿ ಸಂಭವಿಸುತ್ತವೆ. ದೇಹದ ಮೇಲೆ ಗಾಯವಾಗಿದ್ದಾಗ ಆ ಮಾರ್ಗದ ಮೂಲಕ ರಕ್ತಕ್ಕೆ ಪ್ರವೇಶ ಪಡೆದುಕೊಳ್ಳುತ್ತದೆ. ಈ ಬ್ಯಾಕ್ಟೀರಿಯಾದ ಆಹಾರವು ಮಾನವ ಜೀವಕೋಶಗಳು ಮತ್ತು ಅಂಗಾಂಶಗಳಾಗಿವೆ. ಅಂಗಾಂಶಗಳು ಜೀವಕೋಶಗಳಿಂದ ಮಾಡಲ್ಪಟ್ಟಿದೆ ಮತ್ತು ಒಂದೇ ರೀತಿಯ ಅಂಗಾಂಶಗಳು ವಿವಿಧ ಅಂಗಗಳನ್ನು ರೂಪಿಸಲು ಸಂಯೋಜಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಮಾನವನ ದೇಹವನ್ನು ಪ್ರವೇಶಿಸಿದ ನಂತರ, ಅವುಗಳು ತಮ್ಮ ಸಂಖ್ಯೆಯನ್ನು ಬಹಳ ವೇಗವಾಗಿ ಹೆಚ್ಚಿಸಿಕೊಳ್ಳುತ್ತಾ ಮಾಂಸವನ್ನು ತಿನ್ನಲು ಆರಂಭಿಸುತ್ತವೆ. ಈ ಜಾತಿಯ ಬ್ಯಾಕ್ಟೀರಿಯಾಗಳಲ್ಲಿ ಮುಖ್ಯವಾಗಿ 3 ವಿಧಗಳಿವೆ – ವಿಬ್ರಿಯೊ ಕಾಲರಾ, ವಿಬ್ರಿಯೊ ಪ್ಯಾರಾಹೆಮೊಲಿಟಿಕಸ್ವಿ ಮತ್ತು ವಿಬ್ರಿಯೊ ವಲ್ನಿಫಿಕಸ್ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ಸಮುದ್ರದ ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತವೆ. ಮೇ ಮತ್ತು ಅಕ್ಟೋಬರ್ ನಡುವೆ, ಸಮುದ್ರದ ನೀರು ಬೆಚ್ಚಗಿರುವಾಗ, ಅಂತಹ ಬ್ಯಾಕ್ಟೀರಿಯಾಗಳ ಸಂಖ್ಯೆಯು ಹೆಚ್ಚಾಗುತ್ತದೆ.

ಇನ್ನು ಈ ಬ್ಯಾಕ್ಟೀರಿಯಾಗಳು ದುರ್ಬಲ ರೋಗನಿರೋಧಕ ಶಕ್ತಿ ಇರುವವರ ದೇಹಕ್ಕೆ ಹೊಕ್ಕರೆ ರೋಗಿಯು ಒಂದರಿಂದ ಎರಡು ದಿನಗಳಲ್ಲಿ ಸಾಯಬಹುದು.  ಹೃದ್ರೋಗ ಇರುವವರು ಅಥವಾ ಔಷಧಿಗಳನ್ನು ತೆಗೆದುಕೊಳ್ಳುವವರ ದೇಹಕ್ಕೆ ಬ್ಯಾಕ್ಟೀರಿಯಾ ಸೇರಿಕೊಂಡರೆ ಬೇಗ ಅಸ್ವಸ್ಥರಾಗುತ್ತಾರೆ. ಇತರ ಮಾಂಸ ತಿನ್ನುವ ಬ್ಯಾಕ್ಟೀರಿಯಾಗಳಂತೆ, ಈ ಬ್ಯಾಕ್ಟೀರಿಯಾವು ದೇಹವನ್ನು ಪ್ರವೇಶಿಸಿದ ತಕ್ಷಣ ರಕ್ತ ಕಣಗಳ ಮೇಲೆ ದಾಳಿ ಮಾಡುತ್ತದೆ. ಇದು ದೇಹದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಕ್ತದ ಚಲನೆಯನ್ನು ನಿಲ್ಲಿಸುತ್ತದೆ. ಈ ಕಾರಣದಿಂದಾಗಿ, ದೇಹದ ಅನೇಕ ಭಾಗಗಳಲ್ಲಿ ರಕ್ತದ ಕೊರತೆ ಎದುರಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಮೇರಿಕಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಂದರೆ ಸಿಡಿಸಿ ಪ್ರಕಾರ, ವಿಬ್ರಿಯೊ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ ಅತಿಸಾರ ಪ್ರಾರಂಭವಾಗುತ್ತದೆ. ಅದರೊಂದಿಗೆ ವಾಕರಿಕೆ ಮತ್ತು ವಾಂತಿ, ಜ್ವರ, ಶೀತ. ಈ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದ 24 ಗಂಟೆಗಳ ನಂತರವೇ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ರೋಗಲಕ್ಷಣಗಳು ಸತತ 3 ದಿನಗಳವರೆಗೆ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದೆ.

suddiyaana