ಮೂರನೇ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’  – ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ!

ಮೂರನೇ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’  – ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತ ಸಂಘಟನೆಗಳು ದೆಹಲಿ ಚಲೋ ಚಳವಳಿಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಪ್ರವೇಶಿಸಲು ಪಟ್ಟುಹಿಡಿದು ಪ್ರತಿಭಟಿಸುತ್ತಿರುವ ರೈತರನ್ನು ಹಿಮ್ಮೆಟ್ಟಿಸಲು, ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪ್ರತಿಭಟನಾಕಾರರನ್ನು ಹೆಮ್ಮೆಟ್ಟಿಸಲು ʻಶಬ್ದಾಸ್ತ್ರʼ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಚೀನಾ, ಟರ್ಕಿ ಸೇರಿದಂತೆ ಇತರ ದೇಶಗಳಲ್ಲೂ ಬೆಳ್ಳುಳ್ಳಿ ಬೆಲೆ ಭಾರಿ ಏರಿಕೆ! – ದರ ಇಳಿಕೆ ಯಾವಾಗ?

ಹೌದು, ರೈತರು ದೆಹಲಿ ಗಡಿಯನ್ನು ಪ್ರವೇಶಿಸಲು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಬ್ಯಾರಿಕೇಡ್, ಮುಳ್ಳಿನ ತಂತಿ, ಜಲಫಿರಂಗಿ, ಅಶ್ರುವಾಯು, ಕಾಂಕ್ರೀಟ್‌ ಬ್ಯಾರಿಕೇಡ್‌ ಎಲ್ಲಾ ರೀತಿಯ ಅಸ್ತ್ರವನ್ನೂ ಪ್ರಯೋಗಿಸಿದ್ರೂ ಪ್ರತಿಭಟನಾಕಾರರು ಇದ್ಯಾವುದಕ್ಕೂ ಜಗ್ಗುತ್ತಿಲ್ಲ. ಭದ್ರತೆಯನ್ನು ಭೇದಿಸಲು ರೈತರು ಮುಂದಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಾಂಗ್‌ ರೇಂಜ್‌ ಅಕೌಸ್ಟಿಕ್‌ ಡಿವೈಸ್‌ (LRADS) ಶಬ್ಧಸ್ತ್ರ ಬಳಸಿ ರೈತರನ್ನು ಹಿಮ್ಮೆಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ರೈತ ಸಂಘಟನೆಗಳು ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಗುರುವಾರ ಚಂಡೀಗಢದಲ್ಲಿ ರೈತರೊಂದಿಗೆ ಸಭೆ ನಡೆಸಲಿದೆ. ಅಲ್ಲಿಯವರೆಗೂ ರೈತರು ಶಾಂತ ರೀತಿಯಲ್ಲಿ ಇರಲಿದ್ದಾರೆ ಎಂದು ರೈತಮುಖಂಡರೊಬ್ಬರು ತಿಳಿಸಿದ್ದಾರೆ.

ಏನಿದು ಶಬ್ದಾಸ್ತ್ರ?

ಅಮೆರಿಕದ ಮಿಲಿಟರಿ ಪಡೆಗಳು 2000ನೇ ವರ್ಷದ ಆರಂಭದಲ್ಲೇ ಈ ಸಾಧನಗಳನ್ನು ಅಭಿವೃದ್ಧಿ ಪಡಿಸಿವೆ. ವಿವಿಧ ಸಂದರ್ಭಗಳಲ್ಲಿ ಜನಸಮೂಹವನ್ನು ನಿಯಂತ್ರಿಸುವುದು ಮಾತ್ರವಲ್ಲದೇ, ಮೈಕ್ರೋಫೋನ್ ರೀತಿಯಲ್ಲಿ, ರಕ್ಷಣಾ ಸಂದರ್ಭಗಳಲ್ಲೂ ವಿವಿಧೋದ್ದೇಶಗಳಿಗಾಗಿ ಇವುಗಳನ್ನು ಬಳಕೆ ಮಾಡಲಾಗುತ್ತಿದೆ. ಇವುಗಳ ಬೆಲೆ 30 ಲಕ್ಷ ರೂ.ಗಳಷ್ಟಿದೆ. 2013ರಲ್ಲಿ ಇಂಥ 5 LRADS ಗಳನ್ನು ದೆಹಲಿ ಪೊಲೀಸ್ ಇಲಾಖೆ ಖರೀದಿಸಿದೆ. ಈಗ ಪ್ರತಿಭಟನಾಕಾರರನ್ನ ಚದುರಿಸಲು ಅವುಗಳನ್ನು ಬಳಕೆ ಮಾಡುತ್ತಿದೆ. 130 ಡೆಸಿಬಲ್‌ನಷ್ಟು ಜೋರಾಗಿ ಶಬ್ದವನ್ನು ಇದರಿಂದ ಹೊರಡಿಸಲಾಗುತ್ತದೆ. ಇದು ಅತ್ಯಂತ ಕರ್ಕಶವೆನಿಸುತ್ತದೆ. ಇದನ್ನು ಸಾನಿಕ್‌ ಅಸ್ತ್ರವೆಂದೂ ಕರೆಯುತ್ತಾರೆ. ಸಾನಿಕ್‌ ಅಸ್ತ್ರವಷ್ಟೇ ಅಲ್ಲದೇ, ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಗುಂಡು ಹಾರಿಸುವುದನ್ನೂ ಅಭ್ಯಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Shwetha M