ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರು ಸಜ್ಜು! – ಬುಲ್ಡೋಜರ್ಗಳ ಸಮೇತ ಶಂಭು ಗಡಿಯತ್ತ ಹೊರಟ ರೈತರು!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಅನ್ನದಾತರು ಕೈಗೊಂಡಿರುವ ದೆಹಲಿ ಚಲೋ ಮತಷ್ಟು ತೀವ್ರಗೊಂಡಿದೆ. ಪ್ರತಿಭಟನೆಯನ್ನು ತಡೆಯಲು ರಸ್ತೆಗೆ ಹಾಕಲಾದ ಕಾಂಕ್ರೀಟ್ ಬ್ಲಾಕ್ಗಳ ಗೋಡೆ, ಬ್ಯಾರಿಕೇಡ್, ರಸ್ತೆಗೆ ಹೊಡೆದ ರಾಡ್ಗಳನ್ನ ತೆಗೆದು ಹಾಕಲು ಹೈಡ್ರಾಲಿಕ್ ಕ್ರೇನ್, ಜೆಸಿಬಿ ಹಾಗೂ ಭಾರೀ ವಾಹನಗಳ ಸಮೇತ ಶಂಭು ಗಡಿಯತ್ತ ರೈತರು ಹೊರಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮರದಲ್ಲಿ ಅಗೆದಷ್ಟು ಬರ್ತಿದೆ ನಾಣ್ಯಗಳು! – ಹಣ ಬಿಡುವ ಮರ ಇರೋದೆಲ್ಲಿ?
ಸೋಮವಾರದಿಂದ ಸ್ಥಗಿತಗೊಂಡಿದ್ದ ದೆಹಲಿ ಚಲೋ ಬುಧವಾರದಿಂದ ಮತ್ತೆ ಪ್ರಾರಂಭವಾಗಿದೆ. ಕೇಂದ್ರದ ಜೊತೆ ಸಂಧಾನ ವಿಫಲವಾದ ಹಿನ್ನಲೆ ಹೋರಾಟ ಮತ್ತಷ್ಟು ಪ್ರಬಲವಾಗಲಿದೆ. ರೈತರು ಹೈಡ್ರಾಲಿಕ್ ಕ್ರೇನ್, ಜೆಸಿಬಿ, ಭಾರೀ ವಾಹನಗಳನ್ನು ಶಂಭು ಗಡಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ರೈತರ ಹೋರಾಟ ತಡೆಯಲೆಂದೇ ಹಾಕಲಾದ ದೊಡ್ಡ ದೊಡ್ಡ ಕಾಂಕ್ರೀಟ್ ಬ್ಲಾಕ್ಗಳನ್ನ, ಬ್ಯಾರಿಕೇಡ್ ಮೇಲಿನ ಮುಳ್ಳು ತಂತಿಗಳನ್ನ, ರಸ್ತೆಗೆ ಹೊಡೆದ ರಾಡ್ಗಳನ್ನು ತೆಗೆದು ಹಾಕಲು ಗಡಿಯತ್ತ ಬುಲ್ಡೋಜರ್ಗಳು ಸಮೇತ ರೈತರು ಹೊರಟಿದ್ದಾರೆ. ಈ ಸಂಬಂಧ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಫೆಬ್ರವರಿ 13ರಿಂದ ಅನ್ನದಾತರ ದೆಹಲಿ ಚಲೋ ಆರಂಭಿಸಿದ್ದಾರೆ. ಕರ್ನಾಟಕದ ರೈತರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗಿವೆ. ಜೆಸಿಬಿ, ಹೈಡ್ರಾಲಿಕ್ ಕ್ರೇನ್ ಈಗಾಗಲೇ ಪ್ರತಿಭಟನಾ ಸ್ಥಳವನ್ನು ತಲುಪಿವೆ ಎನ್ನಲಾಗಿದ್ದು ಕೇಂದ್ರ ಸರ್ಕಾರದ ಭದ್ರಕೋಟೆಯನ್ನು ಒಡೆಯಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.