ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ರೈತರ ಪ್ರತಿಭಟನೆ – ಗಡಿಯಲ್ಲಿ ಪೊಲೀಸರಿಂದ ಕಟ್ಟೆಚ್ಚರ..!
ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅನ್ನದಾತರ ದೆಹಲಿ ಚಲೋ ಪ್ರತಿಭಟನೆ ಬುಧವಾರದಿಂದ ಮತ್ತೆ ಪ್ರಾರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸುತ್ತಿವೆ. ಧರಣಿ ನಿರತ ರೈತರು ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜಧಾನಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪೊಲೀಸರು ಹಾಗೂ ರೈತರ ಸಂಘರ್ಷದಲ್ಲಿ ಓರ್ವ ರೈತನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರದಿಂದ ಪ್ರತಿಭಟನೆ ಪುನಾರಂಭಗೊಂಡಿದ್ದು, ದೆಹಲಿ ಗಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಂತರ್ ಮಂತರ್ಗೆ ಪ್ರತಿಭಟನಾ ಮೆರವಣಿಗೆ ನಡೆಸೋದಕ್ಕೆ ರೈತರು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ರಜೆ – ಕೆಎಸ್ಆರ್ಟಿಸಿಯಿಂದ 1,500 ಹೆಚ್ಚುವರಿ ಬಸ್ ಸಂಚಾರ
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಪಂಜಾಬ್-ಹರಿಯಾಣದ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಲ್ನಡಿಗೆ, ರೈಲು ಅಥವಾ ಬಸ್ನಲ್ಲಿ ದೆಹಲಿಗೆ ತೆರಳಲು ಇತರ ರಾಜ್ಯಗಳ ರೈತರನ್ನು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಕೇಳಿಕೊಂಡಿದ್ದಾರೆ. ಇದಲ್ಲದೆ ಶಂಭು ಬಾರ್ಡರ್ ಮತ್ತು ಖಾನೌರಿ ಬಾರ್ಡರ್ನಲ್ಲಿ ಕುಳಿತ ರೈತರು ಅಲ್ಲಿಯೇ ಕುಳಿತು ಧರಣಿ ನಡೆಸಲಿದ್ದಾರೆ. ಮಾರ್ಚ್ 10 ರಂದು, ನಾವು ಭಾರತದಾದ್ಯಂತ 12 ರಿಂದ 4 ಗಂಟೆಯವರೆಗೆ ರೈಲು ತಡೆ ನಡೆಸಲು ಕೇಳಿಕೊಂಡಿದ್ದೇವೆ ಎಂದು ರೈತರು ಹೇಳಿದ್ದಾರೆ.