ರೈತರ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ದೆಹಲಿಯತ್ತ – ರಸ್ತೆಗೆ ರಾಡ್ ಹೊಡೆದು ಸನ್ನದ್ಧರಾದ ಪೊಲೀಸರು..!
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ), ರೈತರಿಗೆ ಪಿಂಚಣಿ ಯೋಜನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿವೆ. ದೆಹಲಿ ಚಲೋ ಸೋಮವಾರ ರಾಷ್ಟ್ರರಾಜಧಾನಿ ತಲುಪುವ ನಿರೀಕ್ಷೆ ಇದೆ. ಹೀಗಾಗಿ ರೈತರ ಪ್ರತಿಭಟನೆಯನ್ನು ದೆಹಲಿಯ ಹೊರ ಹೊಲಯದಲ್ಲಿ ತಡೆಯಲು ಅಧಿಕಾರಿಗಳು ರಸ್ತೆಗೆ ರಾಡ್ಗಳನ್ನು ಹೊಡೆದಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಬೇಹುಗಾರಿಕೆ ಆರೋಪದ ಮೇಲೆ ಮರಣ ದಂಡನೆಗೊಳಗಾಗಿದ್ದ 8 ನೌಕಾಪಡೆ ಯೋಧರ ಬಿಡುಗಡೆ
ದೆಹಲಿಯಲ್ಲಿ ಮಂಗಳವಾರ `ದೆಹಲಿ ಚಲೋ’ ನಲ್ಲಿ ನಡೆಯಲಿದ್ದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಈ ಪ್ರತಿಭಟನೆಯಲ್ಲಿ ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ ಹಾಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ರೈತರು ಟ್ರ್ಯಾಕ್ಟರ್ಗಳಲ್ಲಿ ದೆಹಲಿಯತ್ತ ಪ್ರತಿಭಟನೆ ಮೂಲಕ ತೆರಳುತ್ತಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಸಮಾಜ ವಿರೋಧಿ ಶಕ್ತಿಗಳು ನುಸುಳಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಹಲವು ಕಡೆ ಗಡಿಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿದೆ.
ರೈತರನ್ನು ದೆಹಲಿ ಗಡಿಯಲ್ಲೇ ತಡೆಯಲು ಪೊಲೀಸರು ಸರ್ವಸನ್ನದ್ಧರಾಗಿ ನಿಂತಿದ್ದಾರೆ. ಸಿಂಘು, ಘಾಜಿಪುರ ಹಾಗೂ ಟಿಕ್ರಿ ಗಡಿಗಳಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಭದ್ರತೆ ವಹಿಸಲಾಗಿದೆ. ಕೆಲವೆಡೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಗಡಿಗಳಲ್ಲಿ ಕ್ರೇನ್ ಮತ್ತು ಕಂಟೇನರ್‌ಗಳನ್ನು ತಂದಿಡಲಾಗಿದ್ದು, ರೈತರು ದೆಹಲಿ ಪ್ರವೇಶ ಮಾಡಲು ಯತ್ನಿಸಿದ್ರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಆದ್ರೆ ಬ್ಯಾರಿಕೇಡ್‌ಗಳ ಅಸ್ತ್ರವನ್ನು ಭೇದಿಸಲು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ಹಿಟಾಚಿ ರೂಪಕ್ಕೆ ಪರಿವರ್ತಿಸಿದ್ದಾರೆ ಎಂದು ಹೇಳಲಾಗಿದೆ.