ಸಂಕಷ್ಟದಲ್ಲಿ ಸಿಲುಕಿದ್ದಾನೆ ಅನ್ನದಾತ! – ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ 1,219 ರೈತರ ಆತ್ಮಹತ್ಯೆ!

ಸಂಕಷ್ಟದಲ್ಲಿ ಸಿಲುಕಿದ್ದಾನೆ ಅನ್ನದಾತ! – ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ 1,219 ರೈತರ ಆತ್ಮಹತ್ಯೆ!

ಬೆಂಗಳೂರು: ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಾಲದ ಶೂಲದಲ್ಲಿ ಸಿಲುಕಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ಬರೋಬ್ಬರಿ 1,219 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಅಂಕಿ ಅಂಶವು ರಾಜ್ಯದಲ್ಲಿ ಅನ್ನದಾತ ಸಂಕಷ್ಟದಲ್ಲಿ ಇದ್ದಾನೆ ಎಂಬುವುದು ಖಚಿತವಾಗಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022-23 ನೇ ಸಾಲಿನಲ್ಲಿ ( 1-4-2022 ರಿಂದ 31-3-2023) ವರೆಗೆ ಒಟ್ಟು 968 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿ,ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅನ್ನದಾತರು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರ ಪೈಕಿ 849 ಪ್ರಕರಣಗಳನ್ನು ಸರ್ಕಾರ ಅರ್ಹ ಎಂದು ಪರಿಗಣಿಸಿದರೆ 111 ಪ್ರಕರಣಗಳು ತಿರಸ್ಕಾರಗೊಂಡಿವೆ. ಇವುಗಳಲ್ಲಿ 849 ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ ಎಂದು ರಾಜ್ಯ ಸರ್ಕಾರದ ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಮಳೆಯಿಲ್ಲದೆ ಈರುಳ್ಳಿ ಬೆಳೆ ನಾಶ – ಮನನೊಂದು ರೈತ ಆತ್ಮಹತ್ಯೆ

ಯಾವ ಜಿಲ್ಲೆಯಲ್ಲಿ ಹೆಚ್ಚು ರೈತರ ಸಾವು?

2022-23 ಸಾಲಿನಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿ ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ.  ಶಿವಮೊಗ್ಗ ಜಿಲ್ಲೆಯಲ್ಲಿ 43, ಧಾರವಾಡದಲ್ಲಿ 78, ಹಾವೇರಿಯಲ್ಲಿ 122, ಬೆಳಗಾವಿ -81, ಬೀದರ್- 36, ಚಿಕ್ಕಮಗಳೂರು- 53, ಕಲಬುರಗಿ- 50, ಮೈಸೂರು- 83, ಯಾದಗಿರಿ- 56 ಪ್ರಕರಣಗಳು ವರದಿಯಾಗಿವೆ.

ಕಳೆದ ಐದು ತಿಂಗಳಲ್ಲಿ 174 ರೈತರ ಸಾವು

ಇನ್ನು 2023- 24 ನೇ ಸಾಲಿನಲ್ಲಿ ( 1-4-2023 ರಿಂದ 9-9 2023) ರವರೆಗೆ ಒಟ್ಟು 251 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 18 ಪ್ರಕರಣಗಳು ತಿರಸ್ಕೃತಗೊಂಡರೆ 174 ಪ್ರಕರಣಗಳಲ್ಲಿ ಮೃತ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ. ಈ ಅವಧಿಯಲ್ಲಿ ಹಾವೇರಿಯಲ್ಲಿ 38, ಚಿಕ್ಕಮಗಳೂರು- 15, ಬೆಳಗಾವಿ- 29, ವಿಜಯಪುರ -12, ಯಾದಗಿರಿ- 19, ಬೀದರ್ -7, ಕಲಬುರಗಿ -11, ಗದಗ- 4 ಪ್ರಕರಣಗಳು ವರದಿಯಾಗಿವೆ.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಿಮೆ

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಚಾಮರಾಜನರ, ಕೊಡಗು, ಕೋಲಾರ,ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ತೀರಾ ವಿರಳವಾಗಿದೆ. 22-23 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ -3, ಬೆಂಗಳೂರು ಗ್ರಾಮಾಂತರ -0, ಚಾಮರಾಜನಗರ – 2, ಉಡುಪಿ- 0, ರಾಮನಗರ- 0, ಕೋಲಾರ -3 ಪ್ರಕರಣಗಳಷ್ಟೇ ವರದಿಯಾಗಿವೆ. ಅದೇ ರೀತಿ ಪ್ರಸ್ತುತ ವರ್ಷದಲ್ಲಿ ಉಡುಪಿ- 0, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

Shwetha M