ಹಗಲಿನಲ್ಲಿ ಕರೆಂಟ್ ಕೊಡಿ ಎಂದು ಎಷ್ಟೇ ಮನವಿ ಮಾಡಿದರು ಕೇಳದ ಸಿಬ್ಬಂದಿ – ವಿದ್ಯುತ್ ವಿತರಣ ಘಟಕಕ್ಕೆ ಮೊಸಳೆ ತಂದು ಬಿಟ್ಟ ರೈತರು

ಹಗಲಿನಲ್ಲಿ ಕರೆಂಟ್ ಕೊಡಿ ಎಂದು ಎಷ್ಟೇ ಮನವಿ ಮಾಡಿದರು ಕೇಳದ ಸಿಬ್ಬಂದಿ – ವಿದ್ಯುತ್ ವಿತರಣ ಘಟಕಕ್ಕೆ ಮೊಸಳೆ ತಂದು ಬಿಟ್ಟ ರೈತರು

ಮೊದಲೇ ಮಳೆಯಿಲ್ಲ. ಬರದಿಂದ ರೈತರ ಬದುಕು ದುಸ್ತರವಾಗಿದೆ. ಇದರ ಮಧ್ಯೆ, ಹೊಲಗಳಿಗೆ ನೀರು ಹಾಯಿಸಲೇಬೇಕು. ಆದರೆ, ಹೊಲಕ್ಕೆ ನೀರು ಬೇಕೆಂದರೆ ಕರೆಂಟ್ ಇರಲೇಬೇಕು. ಆದರೆ, ಹಗಲಿನಲ್ಲಿ ಕರೆಂಟ್ ಕೊಡುವುದಿಲ್ಲ. ರಾತ್ರಿ ಕರೆಂಟ್ ಕೊಟ್ಟರೆ ಹೊಲದಲ್ಲಿ ಮೊಸಳೆ, ಹಾವುಗಳ ಕಾಟ. ಪದೇ ಪದೇ ರೈತರು ವಿದ್ಯುತ್ ವಿತರಣ ಘಟಕದ ಸಿಬ್ಬಂದಿ ಬಳಿ ಮನವಿ ಮಾಡುತ್ತಲೇ ಇದ್ದರು. ಆದರೆ, ಈ ಬಾರಿ ವಿದ್ಯುತ್ ಘಟಕದ ಸಿಬ್ಬಂದಿಗೆ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿದ ರೀತಿಯಂತೂ ವಿಭಿನ್ನವಾಗಿತ್ತು.

ಇದನ್ನೂ ಓದಿ: ‘ರೈತರು ಎಂದರೆ ಹೆಣ್ಣು ಕೊಡುವುದಿಲ್ಲ. ಕನ್ಯೆಯರ ಪಾಲಕರನ್ನು ಒಪ್ಪಿಸಿ’ – ಸರ್ಕಾರಕ್ಕೆ ಯುವ ರೈತರ ಮನವಿ

ಹೊಲಕ್ಕೆ ನೀರು ಬಿಡಲು ಸರಿಯಾದ ಸಮಯಕ್ಕೆ ಕರೆಂಟ್ ಕೊಡಲಿಲ್ಲ ಅಂತಾ ವಿದ್ಯುತ್ ವಿತರಣಾ ಘಟಕಕ್ಕೆ ರೈತರು ಮೊಸಳೆ ತಂದು ಬಿಟ್ಟಿದ್ದಾರೆ. ವಿಜಯಪುರದ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದ ರೈತರು ಮೊಸಳೆ ಹಿಡಿದುಕೊಂಡು ಬಂದು ವಿದ್ಯುತ್ ವಿತರಣ ಘಟಕದ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ರೈತರ ಈ ನಡೆಯಿಂದ ವಿದ್ಯುತ್ ಘಟಕದ ಸಿಬ್ಬಂದಿ ನಿಜಕ್ಕೂ ಗಾಬರಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಕರೆಂಟ್ ನೀಡದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಇನ್ನು ರೈತರು ಹೊಲಗಳಿಗೆ ನೀರು ಹರಿಸಲು ರಾತ್ರಿ ವೇಳೆಯಲ್ಲಿ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಈ ಸಮಸ್ಯೆ ವಿಜಯಪುರದಲ್ಲಿ ಹೆಚ್ಚಿದೆ. ಪ್ರತಿದಿನ ತಡರಾತ್ರಿ ಕರೆಂಟ್ ನೀಡುತ್ತಾರೆ. ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ? ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆಯಾಗುತ್ತದೆ ಎಂದು ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ. ಹೀಗಾಗಿಯೇ ಈ ರೀತಿ ಮಾಡಿದ್ದೇವೆ ಎಂದು ರೈತರು ಅಸಮಾಧಾನ ಹೊರ ಹಾಕಿದ್ದಾರೆ.

ರಾತ್ರಿ ವೇಳೆ ಕರೆಂಟ್ ನೀಡಿದರೆ ನಾವೇನು ಮಾಡೋದು. ಜಲಚರ ಪ್ರಾಣಿಗಳ ಕಾಟ ಹೆಚ್ಚಿದೆ. ಅದರಲ್ಲೂ ಮೊಸಳೆ, ಹಾವುಗಳ ಕಾಟ ಸಾಕಷ್ಟಿದೆ. ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಎಂದು ಮೊಸಳೆಯನ್ನ ತಂದಿದ್ದೇವೆ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರವಾರ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿತು. ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದೇವೆ. ನಮ್ಮ ಕಷ್ಟ ಗೊತ್ತಾಗಲಿ ಎಂದು ರೈತರೊಬ್ಬರು ಹೇಳಿದ್ದಾರೆ. ರೈತರು ವಿದ್ಯುತ್ ವಿತರಣಾ ಘಟಕಕ್ಕೆ ಮೊಸಳೆ ತರುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡು ಹೋಗಿದ್ದಾರೆ.

Sulekha