10 ವರ್ಷದಿಂದ ಹೆಣ್ಣು ಹುಡುಕುತ್ತಿದ್ರೂ ಸಿಗುತ್ತಿಲ್ಲ – ನಮ್ಮ ಮಕ್ಕಳಿಗೆ ವಧು ಕೊಡಿಸಿ ಎಂದು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದ ರೈತ

10 ವರ್ಷದಿಂದ ಹೆಣ್ಣು ಹುಡುಕುತ್ತಿದ್ರೂ ಸಿಗುತ್ತಿಲ್ಲ – ನಮ್ಮ ಮಕ್ಕಳಿಗೆ ವಧು ಕೊಡಿಸಿ ಎಂದು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದ ರೈತ

ಗಂಡು ಮಕ್ಕಳ ಮೇಲಿನ ವ್ಯಾಮೋಹದಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳು ಹುಟ್ಟುವಾಗ ಗಂಡು ಮಗು ಇರಲಿ ಎನ್ನುವ ಪೋಷಕರು ಬಳಿಕ ಅವರು ದೊಡ್ಡವರಾದ ಮೇಲೆ ಮಾತ್ರ ಹೆಣ್ಣು ಹುಡುಕಲು ಇನ್ನಿಲ್ಲದ ಕಷ್ಟ ಪಡುತ್ತಾರೆ. ವರ್ಷಗಟ್ಟಲೆ ಹುಡುಕಿದ್ರೂ ಮದುವೆ ಮಾತ್ರ ಕೂಡಿ ಬರುತ್ತಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗ್ತಿಲ್ಲ ಅನ್ನೋ ವಿಚಾರ ಭಾರೀ ಚರ್ಚೆಯಾಗ್ತಿದೆ. ತುಮಕೂರಿನಲ್ಲಿ ರೈತರೊಬ್ಬರು ತಮ್ಮ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಅಂತಾ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ₹12 ಲಕ್ಷ ಖರ್ಚು ಮಾಡಿ ಶ್ವಾನದಂತೆ ಬದಲಾದ – ನಾಯಿಯಂತೆ ಬದಲಾದ ಮೇಲೆ ಆತನ ಪಾಡು ಅಯ್ಯೋಪಾಪ

ತುಮಕೂರಿನ ರೈತರೊಬ್ಬರು ಜಿಲ್ಲಾಧಿಕಾರಿ ಮತ್ತು ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ತಮ್ಮ ಮಕ್ಕಳಿಗೆ ಹೆಣ್ಣು ಕೊಡಿಸುವಂತೆ ಪತ್ರ ಬರೆದಿದ್ದಾರೆ. ನಮಗೆ ಮೂರು ಜನ ಮಕ್ಕಳು, ನಮ್ಮೂರಿನಲ್ಲಿ ಇನ್ನೂ ಹಲವು ಯುವಕರಿದ್ದಾರೆ. ಅವರಿಗೂ ಹೆಣ್ಣು ಕೊಡುತ್ತಿಲ್ಲ. ದಯವಿಟ್ಟು ನೀವೆ ಹೆಣ್ಣು ಕೊಡಿಸಿ ನಮ್ಮ ಮನೆತನ ಬೆಳೆಸಿ. ನಮ್ಮ ಮಕ್ಕಳು ರೈತರು ಎಂಬ ಒಂದೇ ಒಂದು ಕಾರಣಕ್ಕೆ ಹೆಣ್ಣು ಕೊಡುತ್ತಿಲ್ಲ. ನಾವು ಎಲ್ಲಾ ವಿಧದಲ್ಲೂ ಹೆಣ್ಣು ಹುಡುಕಿ ಸಾಕಾಗಿದೆ ಎಂಬ ಮನವಿ ಪತ್ರವೊಂದನ್ನು ರೈತ ಜಯರಾಮಪ್ಪ ಅವರು ಶಿರಾ ಕಸಬಾ ಹೋಬಳಿಯ ಚಿಕ್ಕನಕೋಟೆ ಗ್ರಾಮದಲ್ಲಿ ಶಾಸಕ ಟಿ.ಬಿ ಜಯಚಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ನಡೆದ ಜನತಾ ದರ್ಶನದಲ್ಲಿ ಸಲ್ಲಿಸಿದ್ದಾರೆ.

ನಮ್ಮದು ರೈತ ಕುಟುಂಬ, ನನಗೆ ಮೂರು ಜನ ಗಂಡುಮಕ್ಕಳು. ಅವರಿಗೆ ಹೆಣ್ಣು ಕೊಡುತ್ತಿಲ್ಲ. ರೈತರಿಗೆ ನಮ್ಮ ಮಗಳನ್ನ ಕೊಡಲ್ಲ ಅಂತ ಹೆಣ್ಣೆತ್ತವರು ಹೇಳುತ್ತಿದ್ದಾರೆ. ನಾವು ಕಳೆದ ಹತ್ತು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದೇವೆ. ಸದ್ಯ ಚಿಕ್ಕನಕೋಟೆ‌ ಗ್ರಾಮದಲ್ಲಿ ಏಳರಿಂದ ಎಂಟು ಯುವಕರಿಗೆ ಹೆಣ್ಣೇ ಸಿಗುತ್ತಿಲ್ಲ. ಹೀಗಾಗಿ ನೀವೇ ನಮಗೆ ಹೆಣ್ಣು ಕೊಡಿಸಿ ಎಂದು ರೈತ ಜಯರಾಮಪ್ಪ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ರೈತನ ಮನವಿ ಪತ್ರವನ್ನ ಪಡೆದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಮನವಿಯನ್ನು ಎಂಟ್ರಿ ಮಾಡಿಕೊಂಡಿದ್ದಾರೆ.

Shantha Kumari