ಆದಿಪುರುಷ್ ಸಿನಿಮಾದ ಗ್ರಾಫಿಕ್ಸ್ ನೋಡಿ ಸಿಟ್ಟಿಗೆದ್ದ ಫ್ಯಾನ್ಸ್ – ರಾವಣನ ಹತ್ತು ತಲೆ ನೋಡಿ ಅಭಿಮಾನಿಗಳು ಹೇಳಿದ್ದೇನು?

ಆದಿಪುರುಷ್ ಸಿನಿಮಾದ ಗ್ರಾಫಿಕ್ಸ್ ನೋಡಿ ಸಿಟ್ಟಿಗೆದ್ದ ಫ್ಯಾನ್ಸ್ – ರಾವಣನ ಹತ್ತು ತಲೆ ನೋಡಿ ಅಭಿಮಾನಿಗಳು ಹೇಳಿದ್ದೇನು?

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಆದಿಪುರುಷ್ ಸಿನಿಮಾ ನೋಡಿದ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಜೊತೆಗೆ ಸಾಲು ಸಾಲು ಸೋಲು ಕಂಡ ಪ್ರಭಾಸ್, ಆದಿಪುರುಷ್ ಸಿನಿಮಾದಲ್ಲೂ ಅಭಿಮಾನಿಗಳ ಮನಗೆಲ್ಲುವುದು ಕಷ್ಟ ಎನ್ನಲಾಗ್ತಿದೆ. ಇನ್ನು ರಾವಣನ ಹತ್ತು ತಲೆಯ ವಿನ್ಯಾಸ ಎತ್ತೆತ್ತಲೋ ಇರುವುದು ನೋಡಿ ನಗಬೇಕೋ.. ಅಳಬೇಕೋ ಅಂತಿದ್ದಾರೆ ಫ್ಯಾನ್ಸ್. ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾದ ಟೀಸರ್ ಹಾಗೂ ಟ್ರೇಲರ್ ಗಮನ ಸೆಳೆಯಲು ವಿಫಲವಾಗಿತ್ತು. ಆದರೂ, ಇದು 3ಡಿ ಸಿನಿಮಾ ಆಗಿದ್ದರಿಂದ ಅಭಿಮಾನಿಗಳಿಗೆ ಒಂದಷ್ಟು ನಿರೀಕ್ಷೆ ಇತ್ತು. ‘ಆದಿಪುರುಷ್’ ಸಿನಿಮಾ ನೋಡಿದ ಬಳಿಕ ಈ ನಿರೀಕ್ಷೆ ಹುಸಿಯಾಗಿದೆ. ‘ಆದಿಪುರುಷ್’ ಸಿನಿಮಾ ವೀಕ್ಷಿಸಿದ ಅನೇಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ:  ಆದಿಪುರುಷ್ ಸಿನಿಮಾ ನೋಡಲು ಪ್ರೇಕ್ಷಕರ ಕಾತರ – ಬರೋಬ್ಬರಿ 1.50 ಲಕ್ಷ ಟಿಕೆಟ್ ​ಗಳ ಬುಕ್ಕಿಂಗ್!

ಪ್ರಭಾಸ್ ರಾಮನಾಗಿ ಕಾಣಿಸಿಕೊಡರೆ, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಆಂಜನೇಯನ ಪಾತ್ರ ಮಾಡಿರುವ ದೇವದತ್ತ ನಾಗೆ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. ಸೈಫ್ ಅಲಿ ಖಾನ್ ಅವರು ಬೇರೆಯದೇ ಮ್ಯಾನರಿಸಂ ಮೂಲಕ ರಾವಣನಾಗಿ ಆರ್ಭಟಿಸುತ್ತಾರೆ. ರಾವಣನ ಹತ್ತು ತಲೆಯ ವಿನ್ಯಾಸ ಎತ್ತೆತ್ತಲೋ ಸಾಗಿದೆ. ‘ತಾನಾಜಿ’ ಮೂಲಕ ಗಮನ ಸೆಳೆದಿದ್ದ ಓಂ ರಾವತ್ ‘ಆದಿಪುರುಷ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ಗ್ರಾಫಿಕ್ಸ್ ಬಗ್ಗೆ ಟೀಕೆ ಮಾಡಿದ್ದಾರೆ. ರಾಮಾಯಣದ ಕಥೆ ಕುರಿತು ಸಾಕಷ್ಟು ಸಿನಿಮಾ ಹಾಗೂ ಸೀರಿಸ್‌ಗಳು ಬಂದಿವೆ. ಹೀಗಿರುವಾಗ ಮತ್ತದೇ ಕಥೆ ಹೇಳಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಇದನ್ನು ಓಂ ರಾವತ್ ಸರಿಯಾಗಿ ನಿಭಾಯಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಕಷ್ಟು ಮಂದಿ ಸಿನಿಮಾದ ಗ್ರಾಫಿಕ್ಸ್ ಬಗ್ಗೆ ಕಿಡಿಕಾರಿದ್ದಾರೆ. ‘ನೂರಾರು ಕೋಟಿ ಸುರಿದು ಇಷ್ಟು ಕಳಪೆ ಗ್ರಾಫಿಕ್ಸ್ ನಿರೀಕ್ಷಿಸಿರಲಿಲ್ಲ’ ಎಂಬ ಮಾತನ್ನು ಹೇಳುತ್ತಿದ್ದಾರೆ. ರಾಮಾಯದ ಅನೇಕ ಸನ್ನಿವೇಶಗಳನ್ನು ‘ಆದಿಪುರುಷ್’ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಎಲ್ಲ ದೃಶ್ಯವನ್ನು ಮೇಲ್ಮಟ್ಟದಲ್ಲೇ ತೋರಿಸಲಾಗಿದೆಯೇ ಹೊರತು ಯಾವುದರಲ್ಲೂ ಆಳವಾದ ವಿವರಣೆಗಳು ದಕ್ಕುವುದಿಲ್ಲ. ಕೇವಲ ಗ್ರಾಫಿಕ್ಸ್ ಮತ್ತು ತಂತ್ರಜ್ಞಾನದಲ್ಲಿ ಮಾತ್ರವೇ ಇಲ್ಲಿ ಹೊಸತನವನ್ನು ಪ್ರಯತ್ನಿಸಲಾಗಿದೆ. ಇದು ಕೂಡಾ ಪ್ರೇಕ್ಷಕರಿಗೆ ಹಿಡಿಸಿಲ್ಲ. ಶ್ರೀರಾಮನು ವನವಾಸಕ್ಕೆ ಹೊರಡುವ ಸನ್ನಿವೇಶದಿಂದ ಶುರುವಾಗುವ ‘ಆದಿಪುರುಷ್’ ಚಿತ್ರದ ಕಥೆ, ರಾವಣನ ಸಂಹಾರದಲ್ಲಿ ಅಂತ್ಯವಾಗುತ್ತದೆ. ಇದರ ನಡುವೆ ಬರುವ ಎಲ್ಲ ಪ್ರಮುಖ ಸನ್ನಿವೇಶಗಳನ್ನು ತೆರೆಗೆ ತರಲು ಪ್ರಯತ್ನಿಸಲಾಗಿದೆ. ಶೂರ್ಪನಕಿಯ ಮೂಗನ್ನು ಲಕ್ಷ್ಮಣ ಕೊಯ್ದಿದ್ದು, ಸೀತೆಯನ್ನು ರಾವಣ ಅಪಹರಿಸಿದ್ದು, ರಾಮನನ್ನು ಶಬರಿ ಭೇಟಿ ಆಗಿದ್ದು, ವಾಲಿ-ಸುಗ್ರೀವರ ಯುದ್ಧ, ರಾಮಸೇತು ನಿರ್ಮಾಣ, ಆಂಜನೇಯ ಲಂಕಾ ದಹನ ಮಾಡಿದ್ದು, ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಿದ್ದು, ಸಂಜೀವಿನಿಗಾಗಿ ಹನುಮಂತನು ಪರ್ವತವನ್ನೇ ಹೊತ್ತು ತಂದಿದ್ದು, ರಾಮ-ರಾವಣನ ನಡುವಿನ ಯುದ್ಧ ನಡೆದಿದ್ದು, ಸೀತೆಯನ್ನು ರಾಮ ಮರಳಿ ಪಡೆದಿದ್ದು.. ಸೇರಿದಂತೆ ಅನೇಕ ಸನ್ನಿವೇಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ರಾಮಾಯಣದ ಕಥೆಯ ಮೇಲಾಗಲಿ, ಅದರ ಆಶಯದ ಮೇಲಾಗಲಿ ನಿರ್ದೇಶಕ ಓಂ ರಾವತ್ ಅವರು ಹೆಚ್ಚು ಗಮನ ಹರಿಸಿದಂತಿಲ್ಲ. ಅವರು ಸಂಪೂರ್ಣ ಒತ್ತು ನೀಡಿರುವುದು ಗ್ರಾಫಿಕ್ಸ್ ಮೇಲೆ!. ವಿಎಫ್ಎಕ್ಸ್ ಬಲನ್ನೇ ನಂಬಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ರಣರಂಗದ ಪ್ರದೇಶ, ಅಲ್ಲಿನ ಬೆಳಕು, ರಾವಣನ ಕೋಟೆ ಇತ್ಯಾದಿ ಲೊಕೇಷನ್  ನೋಡಿದರೆ ಅಕ್ಷರಶಃ ಯಾವುದೋ ವಿಡಿಯೋ ಗೇಮ್ ನೋಡಿದಂತೆ ಭಾಸವಾಗುತ್ತದೆ. ರಾವಣನ ಸೇನೆಯಲ್ಲಿನ ರಾಕ್ಷಸರಂತೂ ಬೇರೆ ಗ್ರಹದ ಪ್ರಾಣಿಗಳ ರೀತಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕರ ಈ ಕಲ್ಪನೆ ಸಂಪೂರ್ಣ ಭಿನ್ನವೇ ಆಗಿದೆ ಸಾಕಷ್ಟು ಸನ್ನಿವೇಶಗಳನ್ನು ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿರುವುದರಿಂದ ಯಾವುದಕ್ಕೂ ಹೆಚ್ಚಿನ ಮಹತ್ವ ನೀಡಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

suddiyaana