ಸೈನಿಕನಾಗಿ ಶಾರುಖ್ ಖಾನ್, ಉಗ್ರನಾಗಿ ಜಾನ್ ಅಬ್ರಾಹಂ – ‘ಪಠಾಣ್’ ಟ್ರೇಲರ್‌ಗೆ ಫ್ಯಾನ್ಸ್ ಫಿದಾ

ನಾಲ್ಕು ವರ್ಷಗಳ ನಂತರ ಬಾಲಿವುಡ್‌ನ ಬಾದ್‌ಶಹಾ ಶಾರುಖ್ ಖಾನ್ ತೆರೆ ಮೇಲೆ ಭರ್ಜರಿಯಾಗಿ ಎಂಟ್ರಿಯಾಗ್ತಿದ್ದಾರೆ. ಬಾಲಿವುಡ್ ಕಿಂಗ್‌ಖಾನ್ ಅಭಿನಯದ ‘ಪಠಾಣ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅದರಲ್ಲೂ ಟ್ರೇಲರ್ ಆರಂಭದಲ್ಲಿ ‘ಪಠಾಣ್ ವನವಾಸ ಮುಗಿಸಿ ಬರುವ ಟೈಮ್ ಆಯಿತು’ ಎಂಬ ಡೈಲಾಗ್ ಬರುತ್ತದೆ. ಈ ಸಾಲು ಶಾರುಖ್ಗೆ ಹೊಂದುತ್ತದೆ ಅನ್ನೋ ಮಾತು ಕೇಳಿಬರುತ್ತಿದೆ. ಯಾಕೆಂದರೆ, ಶಾರುಖ್ ಖಾನ್ ಅವರು 2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಬ್ರೇಕ್ ಪಡೆದುಕೊಂಡಿದ್ದರು. ನಾಲ್ಕು ವರ್ಷದ ಬಳಿಕ ಅವರು ‘ಪಠಾಣ್’ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ನಲ್ಲಿಯೇ ಕಿಂಗ್‌ಖಾನ್ ಮಾಡ್ತಿರುವ ಕಮಾಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು
ಜಾನ್ ಅಬ್ರಾಹಂ ‘ಪಠಾಣ್’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ರಾ ಏಜೆಂಟ್ ಆಗಿ ಮಿಂಚಿದ್ದಾರೆ. ಟ್ರೇಲರ್ನ ಉದ್ದಕ್ಕೂ ಸಾಕಷ್ಟು ಆ್ಯಕ್ಷನ್ಗಳಿವೆ. ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿ ಆಗಿ ಫೈಟ್ ಮಾಡಿದ್ದಾರೆ. ಕಾರ್ ಚೇಸಿಂಗ್ ದೃಶ್ಯಗಳು ಮೈನವೇರೇಳಿಸಿದೆ. ಸಿದ್ದಾರ್ಥ್ ಆನಂದ್ ಅವರು ‘ವಾರ್’ ಅಂತಹ ಆ್ಯಕ್ಷನ್ ಸಿನಿಮಾ ಮಾಡಿ ಫೇಮಸ್ ಆದವರು. ಅವರು ‘ಪಠಾಣ್’ ಚಿತ್ರ ಮಾಡಿದ್ದಾರೆ. ಇಲ್ಲಿಯೂ ಭರಪೂರ ಆ್ಯಕ್ಷನ್ ದೃಶ್ಯ ಇಟ್ಟಿದ್ದಾರೆ.
ಔಟ್ ಫುಟ್ ಎಕ್ಸ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಜಾನ್ ಅಬ್ರಾಹಂ, ಈ ಸಂಘಟನೆಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಾರೆ. ಈ ದಾಳಿಯನ್ನು ಭಾರತ ರಾ ಏಜೆಂಟ್ ಆಗಿರುವ ಶಾರುಖ್ ಖಾನ್ ಹೇಗೆ ತಡೆಯುತ್ತಾರೆ ಎನ್ನುವುದೇ ಪಠಾಣ್ ಸಿನಿಮಾದ ಕಥಾ ಹಂದರ. ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಕಾರಣವಾಗಿರುವ ಈ ಸಿನಿಮಾ, ದೇಶಪ್ರೇಮವನ್ನು ಸಾರಲಿದೆ ಎಂದು ಈ ಹಿಂದೆಯೇ ಶಾರುಖ್ ಹೇಳಿದ್ದರು. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಪ್ರತಿಕ್ರಿಯಿಸಿದ್ದರು. ಕಥಾ ಹಂದರ ಮತ್ತು ಶಾರುಖ್ ಮಾಡಿರುವ ಪಾತ್ರವನ್ನು ಗಮನಿಸಿದರೆ ಇದಕ್ಕಾಗಿಯೇ ಶಾರುಖ್ ಹಾಗೆ ಹೇಳಿದ್ದರು ಎನ್ನಲಾಗ್ತಿದೆ.