ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ನಿಧನ – ಕಳಚಿತು ಕನ್ನಡ ಸಾಹಿತ್ಯ ಲೋಕದ ಹಿರಿಯಕೊಂಡಿ
ವನಸಿರಿಯಲ್ಲಿ ಮುಗಿಯಿತು ಸಾಹಿತ್ಯದ ಕೃಷಿ -ಕರಾವಳಿಯ ಜನಪ್ರಿಯ ಸಾಹಿತಿಗೆ ಅಂತಿಮ ನಮನ

ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ನಿಧನ – ಕಳಚಿತು ಕನ್ನಡ ಸಾಹಿತ್ಯ ಲೋಕದ ಹಿರಿಯಕೊಂಡಿವನಸಿರಿಯಲ್ಲಿ ಮುಗಿಯಿತು ಸಾಹಿತ್ಯದ ಕೃಷಿ -ಕರಾವಳಿಯ ಜನಪ್ರಿಯ ಸಾಹಿತಿಗೆ ಅಂತಿಮ ನಮನ

ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ನಿಧನರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಯಾಗಿದ್ದ ಗಟ್ಟಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ಉಡುಪಿಯ ಟಿ.ಎಂ.ಪೈ ಮಹಾವಿದ್ಯಾಲಯದಲ್ಲಿ ಅಧ್ಯಾಪಕರೂ ಆಗಿದ್ದ ಗಟ್ಟಿ, ಕಾದಂಬರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: ʼಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸುʼ! – ಶಾಲೆಗಳಲ್ಲೇ ಮತ್ತೊಂದು ವಿವಾದದ ಕಿಡಿ ಹಚ್ಚಿತಾ ರಾಜ್ಯ ಸರ್ಕಾರ?

ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೂಡ್ಲು ತಿಮ್ಮಪ್ಪ ಗಟ್ಟಿ ಫೆಬ್ರವರಿ 19, ಸೋಮವಾರ ನಿಧನರಾದರು. ಕೆ.ಟಿ ಗಟ್ಟಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆ.ಟಿ ಗಟ್ಟಿ ಅವರು ಪತ್ನಿ ಯಶೋದಾ, ಪುತ್ರ ಸತ್ಯಜಿತ್, ಪುತ್ರಿಯರಾದ ಪ್ರಿಯದರ್ಶಿನಿ, ಜಿತ್ ಪ್ರಭಾ ಅವರನ್ನು ಅಗಲಿದ್ದಾರೆ.

ಕೆ.ಟಿ. ಗಟ್ಟಿಯವರು 1938ರ ಜುಲೈ 22 ರಂದು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ದಕ್ಷಿಣ ಕನ್ನಡದಲ್ಲಿ ನೆಲಸಿದ್ದರು. 1957ರಿಂದ ಸಾಹಿತ್ಯಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಲು ಆರಂಭಿಸಿದರು ಕೆ.ಟಿ ಗಟ್ಟಿ. ಇವರ ಸಾಹಿತ್ಯ ಪ್ರೀತಿಗೆ ಹೆತ್ತವರೇ ಸ್ಪೂರ್ತಿಯಾಗಿದ್ದರು. ತಂದೆ ತಾಯಿಯ ಪ್ರೇರಣೆಯಿಂದ ಬರವಣಿಗೆ ಆರಂಭಿಸಿದರು. ತಂದೆ ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾಗಿದ್ದರು. ತಾಯಿ ಪರಮೇಶ್ವರಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು ಮತ್ತು ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಮೂಡಿತು. ಕಾಸರಗೋಡಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಭೋದನೆ ಜೊತೆ ಜೊತೆಗೆಯೇ ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು.

1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರ ಜೊತೆಗೆ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿ ಕಾರ್ಯನಿರ್ವಹಿಸಿ 1982ರಲ್ಲಿ ಸ್ವದೇಶಕ್ಕೆ ಮರಳಿದರು. ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡರು.

ಕೆ ಟಿ ಗಟ್ಟಿಯವರ ಮೊದಲ ಕಾದಂಬರಿ ಶಬ್ದಗಳು. ಈ ಕಾದಂಬರಿ ಧಾರಾವಾಹಿಯಾಗಿ 1976ರಲ್ಲಿ ಸುಧಾವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಕಾದಂಬರಿಗಳು

ಕಾರ್ಮುಗಿಲು, ಪುನರಪಿ ಜನನಂ, ಬಿಸಿಲುಗುದುರೆ, ಕಾಮರೂಪಿ, ಸನ್ನಿವೇಶ, ಉರಿ, ಶಬ್ದಗಳು, ನಿರಂತರ, ಸ್ವರ್ಣ ಮೃಗ, ಅಬ್ರಾಹ್ಮಣ, ಪರುಷ, ಅಶ್ರುತ ಗಾನ, ಅರಗಿನ ಅರಮನೆ, ಶಿಲಾ ತಪಸ್ವಿ, ಸನ್ನಿವೇಶ, ಗ್ಲಾನಿ, ಪರಮಾರ್ಥ, ಪರಿಧಿ, ಪೂಜಾರಿ, ಮನೆ, ಕೆಂಪು ಕಳವೆ, ಕರ್ಮಣ್ಯೇವಾಧಿಕಾರಸ್ತೆ, ಭೂಮಿಗೀತೆ, ಕೂಪ, ಅಪೂರ್ಣ, ಸುಖಾಂತ, ಸಾಫಲ್ಯ, ಕಾಮಯಜ್ಞ, ಅವಿಭಕ್ತರು, ರಸಾತಳ, ನವೆಂಬರ್ 10, ಯುಗಾಂತರ, ಮಿತಿ, ರಾಗಲಹರಿ, ಮೃತ್ಯೋರ್ಮಾ ಅಮೃತಂ ಗಮಯ, ಏಳು ಮಲ್ಲಿಗೆ ತೂಕದ ಹುಡುಗಿ, ಇತಿಹಾಸದ ಮೊಗಸಾಲೆಯಲ್ಲಿ, ಅನಂತರ, ಅಂತರಂಗದ ಅತಿಥಿ, ಯುದ್ಧ. ಇವರು ಬರೆದ ಕಾದಂಬರಿಗಳು ಐವತ್ತರ ಸಂಖ್ಯೆಯನ್ನು ಮೀರಿವೆ.

ಪತ್ರಿಕೆಗಳಿಗೆ ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’, ‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ. ವೈಚಾರಿಕ ಬರಹಗಳು ಶಿಕ್ಷಣ, ಸಾಹಿತ್ಯ, ಸಾಮಾಜಿಕ ಈ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಅವರ ಹಲವಾರು ಮೌಲಿಕ ಲೇಖನಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ‘ನಮ್ಮೊಳಗಿನ ಆಕಾಶ’, ‘ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ’ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ. ನಾಟಕಗಳು ನಾಟಕ ಕೃತಿಗಳು ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಮುಂತಾದವು. ಹೀಗೆ ಮೂಡಿ ಬಂದ ಇಪ್ಪತ್ತಕ್ಕೂ ಹೆಚ್ಚು ನಾಟಕಗಳು ಅವರಿಂದ ಮೂಡಿ ಬಂದಿವೆ.

ಪ್ರಶಸ್ತಿ ಗೌರವಗಳು

ಸಾಹಿತ್ಯ ಕ್ಷೇತ್ರದ ಗಣನೀಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ‘ಸಂದೇಶ’ ವರ್ಷದ ಲೇಖಕ ಪ್ರಶಸ್ತಿ, ಸಾಹಿತ್ಯ ಸವ್ಯಸಾಚಿ -2011 ಗೌರವ, ನಾಟಕಗಳಿಗಾಗಿ ಚದುರಂಗ ಪ್ರಶಸ್ತಿ ಮತ್ತು ಸಮತಂತೋ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ 10ನೇಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಕಾಸರಗೊಡು ಜಿಲ್ಲಾ 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕುಟುಂಬದವರಿಂದ ಕೆ.ಟಿ ಗಟ್ಟಿಯವರ ದೇಹದಾನ

ಸೋಮವಾರ ಮಧ್ಯಾಹ್ನ 3ಗಂಟೆ ತನಕ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಜೆ ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

Sulekha