ಇಹಲೋಕದ ಯಾತ್ರೆ ಮುಗಿಸಿದ ರಾಜು ತಾಳಿಕೋಟೆ – ಹಾಸ್ಯ ಮಾಂತ್ರಿಕನಿಗೆ ಕಣ್ಣೀರಿನ ವಿದಾಯ!

ಖ್ಯಾತ ಪೋಷಕ ನಟ, ಹಾಸ್ಯ ನಟ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇದನ್ನೂ ಓದಿ: ತೀವ್ರ ಹೃದಯಾಘಾತ – ಚಿಕಿತ್ಸೆ ಫಲಿಸದೆ ಪತ್ರಕರ್ತ ಶ್ರೇಯಸ್ ಆರ್ ನಿಧನ
ಉಡುಪಿಯಲ್ಲಿ ನಡೆಯುತ್ತಿದ್ದ ಸಿನಿಮಾ ಶೂಟಿಂಗ್‌ನಲ್ಲಿ ರಾಜು ತಾಳಿಕೋಟೆ ಭಾಗಿಯಾಗಿದ್ರು. ಭಾನುವಾರ ವಿಶ್ರಾಂತಿ ವೇಳೆ ಅವರು ಅಸ್ವಸ್ಥರಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಟ ನಿಧನರಾಗಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನ ಹುಟ್ಟೂರಿಗೆ ತರಲಾಗಿದ್ದು, ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರ ಭಾಗದಲ್ಲಿರುವ ತೋಟದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನದ ಬಳಿಕ ಚಿಕ್ಕಸಿಂದಗಿ ತೋಟದಿಂದ ಚಿಕ್ಕಸಿಂದಗಿ ಗ್ರಾಮದವರೆಗೆ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಖಬರಸ್ಥಾನದಲ್ಲಿ ಮಾಲ್ವಿಗಳ ನೇತೃತ್ವದಲ್ಲಿ ಇಸ್ಲಾಂ ಸಂಪ್ರದಾಯದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿತು. ಕುಟುಂಬಸ್ಥರು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ದಫನ್ ಮಾಡುವ ಮೂಲಕ ರಾಜು ತಾಳಿಕೋಟಿ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ರಾಜು ತಾಳಿಕೋಟೆ ನಿರ್ದೇಶಕ ಆನಂದ್ ಪಿ.ರಾಜು ಅವರ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೂ ಬಂದರು. ನಂತರ ಕೆಲ ಪಾತ್ರಗಳಲ್ಲಿ ಅಭಿನಯ ಮಾಡಿದ್ದರೂ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಯೋಗರಾಜ್ ಭಟ್ ಅವರ ಮನಸಾರೆ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಮನಸಾರೆ ಬಳಿಕ ಪವರಂಗಿ, ಪುನೀತ್ ರಾಜ್‍ಕುಮಾರ್ ಜೊತೆ ಜಾಕಿ ಸಿನಿಮಾ, ಸುಗ್ರೀವಾ, ಮೈನಾ ಹೀಗೆ 35ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಖಾಸ್ಗತೇಶ್ವರ ನಾಟ್ಯ ಸಂಘದ ಸಂಚಾಲಕರಾಗಿ ರಾಜ್ಯಾದ್ಯಂತ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟಾಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ ‘ಕಲಿಯುಗದ ಕುಡುಕ’ ನಾಟಕದ ಮುಖಾಂತರ ರಾಜ್ಯಾದ್ಯಂತ ಅವರು ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು. ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದರು. ಸದ್ಯ ಅವರು ಧಾರವಾಡ ರಂಗಾಯಣ ನಿರ್ದೇಶಕರೂ ಆಗಿದ್ದರು.
ಹಲವು ಪ್ರಶಸ್ತಿಗಳು: ಅವರಿಗೆ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕೆಸೇಟ್ ಕಿಂಗ್, ಕನ್ನಡದ ಸೆಂದಿಲ್ ಸೇರಿ ಹಲವು ಬಿರುದುಗಳಿದ್ದವು. 2011ರಲ್ಲಿ ಫೀಲ್ಮ್ಫೇರ್ ಅವಾರ್ಡ್, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯ ಪಾಪ್ಯುಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಅವರಿಗೆ ನೀಡಲಾಗಿತ್ತು.

ನೋಡಿರಿ

