ಖ್ಯಾತ ಉದ್ಯಮಿ ಮೇಲೆ ಬೀದಿನಾಯಿಗಳಿಂದ ದಾಳಿ! – ಬದುಕುಳಿಯಲಿಲ್ಲ 2,000 ಕೋಟಿ ಒಡೆಯ!
ಬೀದಿನಾಯಿಗಳು ರಸ್ತೆಯಲ್ಲಿ ಓಡಾಡುತ್ತಿರುವವರ ಮೇಲೆ ದಾಳಿ ಮಾಡುತ್ತಿರುವ ಕುರಿತ ಆಗಾಗ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ದೇಶದಾದ್ಯಂತ ಹಲವು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದೀಗ ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಖ್ಯಾತ ಉದ್ಯಮಿ, ವಾಘ್ ಬಕ್ರಿ ಟೀ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ ನಿಧನರಾಗಿದ್ದಾರೆ.
ಪರಾಗ್ ದೇಸಾಯಿ ಅವರು 15ರಂದು ತಮ್ಮ ಮನೆ ಮುಂದೆ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಬೀದಿನಾಯಿಗಳು ಅವರ ಮೇಲೆ ದಾಳಿ ನಡೆಸಿವೆ. ಈ ವೇಳೆ ತಮ್ಮ ಮನೆಯ ಬಳಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದು, ಮಿದುಳಿನ ರಕ್ತಸ್ರಾವವಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿಯಿಂದ ನಾಯಿ ದಾಳಿ ವಿಷಯ ತಿಳಿದ ಕುಟುಂಬಸ್ಥರು ದೇಸಾಯಿ ಅವರನ್ನು ಶೆಲ್ಬಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಒಂದು ದಿನದ ಚಿಕಿತ್ಸೆಯ ಬಳಿಕ ಅವರನ್ನು ಸರ್ಜರಿಗಾಗಿ ಜೈಡಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಪರಾಗ್ ಅವರು ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 22ರಂದು ನಿಧನರಾಗಿದ್ದಾರೆ. ದೇಸಾಯಿ ಪತ್ನಿ ವಿದಿಶಾ ಮತ್ತು ಮಗಳ ಹೆಸರು ಪರಿಶಾರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಅಹ್ಮದಾಬಾದ್ನ ಟಾಲ್ಟೆಜ್ ಶವಗಾರದಲ್ಲಿ ನಡೆಯಲಿದೆ. ಪರಾಗ್ ದೇಸಾಯಿ ನಿಧನಕ್ಕೆ ಕಾಂಗ್ರೆಸ್ ಸಂಸದ ಶಕ್ತಿಸಿನ್ಹಾ ಗೋಹಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
2,000 ಕೋಟಿ ವಹಿವಾಟುದಾರ ಪರಾಗ್ ದೇಸಾಯಿ!
ಅಮೇರಿಕಾದಲ್ಲಿ MBA ಮುಗಿಸಿದ್ದ ದೇಸಾಯಿ ವಾಘ್ ಬಕ್ರಿ ಟೀ ಗುಂಪಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಕಂಪನಿಯನ್ನು ಇ-ಕಾಮರ್ಸ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪರಾಗ್ ದೇಸಾಯಿ ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ರಫ್ತು ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ವಾಘ್ ಬಕ್ರಿ ಗ್ರೂಪ್ (ವಾಘ್ ಬಕ್ರಿ ಟೀ) ಅನ್ನು 1892 ರಲ್ಲಿ ನಾರಂದಾಸ್ ದೇಸಾಯಿ ಅವರು ಪ್ರಾರಂಭಿಸಿದ್ದರು. ಈ ಕಂಪನಿಯ ಪ್ರಸ್ತುತ ವಹಿವಾಟು ಸುಮಾರು 2,000 ಕೋಟಿಯಾಗಿದೆ. ಈ ಕಂಪನಿಯು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವ್ಯವಹಾರ ನಡೆಸುತ್ತಿದೆ.