ಸ್ಯಾಂಡಲ್ ವುಡ್ ಗೆ ಖ್ಯಾತ ನಟನ ಎಂಟ್ರಿ – ಸೀಕ್ರೆಟ್ ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್!

ಮಲಯಾಳಂ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ ಬಹುಬೇಡಿಕೆಯ ನಟ ಫಹಾದ್ ಫಾಸಿಲ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿತ್ತು. ಆದರೆ ಆವರು ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಗುಟ್ಟಾಗಿಯೇ ಇತ್ತು. ಇದೀಗ ಈ ಸೀಕ್ರೆಟ್ ರಿವೀಲ್ ಆಗಿದೆ.
ಇದನ್ನೂ ಓದಿ: ರಿಲೀಸ್ ದಿನವೇ ಪಠಾಣ್ ಗೆ ಪೈರಸಿ ಕಾಟ – ಶಾರುಖ್ ಟೀಮ್ ಗೆ ಬಿಗ್ ಶಾಕ್
ಹೌದು, ಮಲಯಾಳಂ ನಟ ಫಹಾದ್ ಫಾಸಿಲ್ ಚಂದನವನಕ್ಕೆ ಎಂಟ್ರಿಯಾಗುತ್ತಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು. ಆದರೆ ಫಾಸಿಲ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಸಿರಲಿಲ್ಲ. ಇದು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಫಹಾದ್ ಕಾಣಿಸಿಕೊಳ್ಳಲಿದ್ದಾರೆ ಅಂತ ಚಿತ್ರತಂಡ ಘೋಷಿಸಿದೆ. ಈಗಾಗಲೇ ಚಿತ್ರ ತಂಡ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣದ ವೇಳೆ ಫಹಾದ್ ಫಾಸಿಲ್ ಬಘೀರ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಬಘೀರ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಟ ಶ್ರೀಮುರಳಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ತೆರಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಶ್ರೀ ಮುರಳಿ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಬಘೀರ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ.