ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ – ಹೆಚ್‌ಡಿ ದೇವೇಗೌಡ

ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ – ಹೆಚ್‌ಡಿ ದೇವೇಗೌಡ

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನ ಮಂತ್ರಿ  ಹೆಚ್ ಡಿ ದೇವೇಗೌಡ 92 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಜ್ವಲ್ ಪ್ರಕರಣದ ನಂತರ ಹೊರಗೆಲ್ಲೂ ಕಾಣಿಸದ ದೇವೇಗೌಡರು, ತಮ್ಮ ಜನ್ಮದಿನದಂದು ಪ್ರತಿವರ್ಷ ಮಾಡುವಂತೆ ಅವರ ಮನೆಗೆ ಹತ್ತಿರವಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್ ಕೇಸ್‌ – ಜರ್ಮನಿಯಿಂದ ಲಂಡನ್ ಗೆ ಹಾರಿದ್ರಾ ಪ್ರಜ್ವಲ್?  

ಕಳೆದ ಎರಡು ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗೆ ಹಾಗೂ ಜೆಡಿಎಸ್‌ ಕಾರ್ಯಕರ್ತರಿಗೆ ತಮ್ಮ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಹೇಳಿದ್ದರು. ಶನಿವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಡಿ, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮಗೆ ಶುಭಾಷಯ ಕೋರಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಈ ವರ್ಷ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡವೆಂದು ಬೆಂಬಲಿಗರಿಗೆ ವಿನಂತಿ ಮಾಡಿದ್ದೇನೆ, ಅವರು ತಮಗೆ ಹತ್ತಿರದ ದೇವಸ್ಥಾನಗಳಿಗೆ ಹೋಗಿ ನನಗಾಗಿ ಪೂಜೆ ಮಾಡಿಸಿದರೆ ಸಾಕು ಎಂದು ಹೇಳಿದರು.

ಇನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಹೆಚ್​​​ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ. ಆದರೆ ರೇವಣ್ಣ ವಿರುದ್ಧ ಆರೋಪ ಮಾಡಿರುವುದರ ಸತ್ಯ ಜನರಿಗೆ ಗೊತ್ತಿದೆ. ರೇವಣ್ಣ ಪ್ರಕರಣದ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ ರಂದು ಹೇಳಿದರು.

ಈ ಘಟನೆ ಬಗ್ಗೆ ಕುಟುಂಬದ ಪರವಾಗಿ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ. ಇದರಲ್ಲಿ ಅನೇಕ ಜನರಿದ್ದಾರೆ, ಅವರ ಹೆಸರನ್ನು ಹೇಳಲು ಹೋಗಲ್ಲ. ಅನ್ಯಾಯಕ್ಕೆ ಒಳಗಾಗಿರುವ ಸಂತ್ರಸ್ತೆಯರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಇದು ಯಾವ ರೀತಿ ನಡೆಯಿತು ಎಂದು ನಾನು ವಿಶ್ಲೇಷಣೆ ಮಾಡಲ್ಲ. ಡಿಸಿಎಂ ಡಿಕೆ ಶಿವಕುಮಾರ್ 100 ಕೋಟಿ ಆಫರ್ ಮಾಡಿದ್ದರು ಎಂಬ ದೇವರಾಜೇಗೌಡ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದೂ ಅವರು ಹೇಳಿದರು.

ದೇವರಾಜೇಗೌಡ ಏನು ಹೇಳಿದ್ದಾರೆಂದು ಮಾಧ್ಯಮದಲ್ಲಿ ನೋಡಿದ್ದೇವೆ. ಎಲ್ಲದಕ್ಕೂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಯಾವುದೇ ವಿಚಾರ ಬಂದರೂ ಹೋರಾಟ ಮಾಡುವ ಛಲ ಇದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಕಡೆ ನಾನು ಪ್ರಚಾರ ಮಾಡಿದ್ದೇನೆ. ಚುನಾವಣಾ ಫಲಿತಾಂಶ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾರನ್ನೂ ಭೇಟಿ ಮಾಡಲ್ಲ ಎಂದು ಅವರು ತಿಳಿಸಿದರು.

Shwetha M