ಅಯ್ಯೋ ರಾಮ ರಾಮ – ಅಯ್ಯೋಧ್ಯೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅಕ್ರಮ

ಅಯ್ಯೋ ರಾಮ ರಾಮ – ಅಯ್ಯೋಧ್ಯೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅಕ್ರಮ

ಅಯೋಧ್ಯೆ ರಾಮ ಮಂದಿರದ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ದೇಣಿಗೆ ಕಳ್ಳತನ ಹಗರಣವು ಈಗ ಕೇವಲ ಹಣದ ದುರುಪಯೋಗಕ್ಕೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡ ಮಟ್ಟದ ‘ನಕಲಿ ನೇಮಕಾತಿ ದಂಧೆ’ ನಡೆದಿರುವ ಆಘಾತಕಾರಿ ಸುಳಿವು ಪೊಲೀಸರಿಗೆ ಸಿಕ್ಕಿದೆ. ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಸಿದ ಬೆನ್ನಲ್ಲೇ, ಅಯೋಧ್ಯಾ ಪೊಲೀಸರು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ದೇವಾಲಯದ ಒಳಗೆ ಕಾಣಿಕೆ ಹಣ ಎಣಿಸಲು ನೇಮಕಗೊಂಡಿದ್ದ ಸಿಬ್ಬಂದಿಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದಾಗ ದೊಡ್ಡ ವಂಚನೆ ಬೆಳಕಿಗೆ ಬಂದಿದೆ. ಜೈಲು ಪಾಲಾಗಿರುವ ಹಲವು ಸಿಬ್ಬಂದಿಯ ಅಧಿಕೃತ ನೇಮಕಾತಿ ಪತ್ರಗಳು ಉದ್ಯೋಗ ಒಪ್ಪಂದಗಳು ಅಥವಾ ಯಾವುದೇ ದಾಖಲೆಗಳು ಪೊಲೀಸರಿಗೆ ಇದುವರೆಗೆ ಪತ್ತೆಯಾಗಿಲ್ಲ.

ಇದನ್ನೂ ಓದಿ: ತಾವರಕೆರೆಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಲವ್ ಕುಶ್ ಮಿಶ್ರಾ ಮತ್ತು ಅನುಕಲ್ಪ್ ಮಿಶ್ರಾ ಎಂಬ ಇಬ್ಬರು ಪ್ರಮುಖ ಆರೋಪಿಗಳು, ತನಿಖೆಯ ವ್ಯಾಪ್ತಿಯಲ್ಲಿರುವ ಟ್ರಸ್ಟ್‌ನ ಉನ್ನತ ಅಧಿಕಾರಿಗಳ ಹತ್ತಿರದ ಸಂಬಂಧಿಕರಾಗಿದ್ದಾರೆ. ಇವರ ಶಿಫಾರಸಿನ ಮೇರೆಗೆ ಬ್ಯಾಕ್ ಡೋರ್ ಎಂಟ್ರಿ ಮೂಲಕ ಯಾರ ನಿರ್ದೇಶನದ ಮೇರೆಗೆ ಇವರನ್ನು ಸೇರಿಸಿಕೊಳ್ಳಲಾಗಿತ್ತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಟ್ರಸ್ಟ್ ಸದಸ್ಯರ ವಿಚಾರಣೆಗೆ ಸಜ್ಜಾಗಿದ್ದಾರೆ.

ಆರೋಪಿ ಅವಿನಾಶ್ ಶುಕ್ಲಾ 20 ಲಕ್ಷ ರೂ.ಗೂ ಹೆಚ್ಚು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಇದು ದೇವಾಲಯದ ಹಣ ಕದ್ದವರಲ್ಲಿ ಅತೀ ಹೆಚ್ಚಿನ ಲೂಟಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಪ್ರಾರಂಭಿಸುವ ಮೊದಲೇ ದೇವಸ್ಥಾನದ ಟ್ರಸ್ಟ್ ಆರೋಪಿಗಳಿಂದ ಹಣ ಮರಳಿ ಪಡೆಯುವ ಕಾರ್ಯವನ್ನು ಪ್ರಾರಂಭಿಸಿತ್ತು ಎಂಬುದನ್ನು ಕೂಡ ದಾಖಲೆಗಳು ತೋರಿಸಿವೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ವಿಶೇಷಾ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ರಾಮಕಾಂತ್ ಮಿಶ್ರಾ, ಕರುಣೇಶ್ ಪಾಂಡೆ, ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಮತ್ತು ಮನೀಶ್ ಕುಮಾರ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.

Kishor KV