ಚಲುವರಾಯಸ್ವಾಮಿ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ್ದ ಇಬ್ಬರು ಕೃಷಿ ಅಧಿಕಾರಿಗಳ ಬಂಧನ – ಲೆಟರ್ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ

ಚಲುವರಾಯಸ್ವಾಮಿ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ್ದ ಇಬ್ಬರು ಕೃಷಿ ಅಧಿಕಾರಿಗಳ ಬಂಧನ – ಲೆಟರ್ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ

ಕೃಷಿ ಸಚಿವ ಚಲುವರಾಯಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು. ಮಂಡ್ಯ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕರೇ ಪತ್ರ ಬರೆದು ಸಹಿ ಹಾಕಿದ್ದಾರೆ ಎನ್ನಲಾಗಿತ್ತು. ಇದೇ ವಿಚಾರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ರಾಜ್ಯ ರಾಜಕಾರಣದಲ್ಲೂ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದು, ಇದೀಗ ನ್ಯಾಯಾಲಯ ಇಬ್ಬರನ್ನು ಪೊಲೀಸ್​ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳು ನಾಡು – ಸುಪ್ರೀಂ ಕೋರ್ಟ್ ಗೆ ಇಂದು ಕರ್ನಾಟಕ ಮೇಲ್ಮನವಿ ಸಲ್ಲಿಕೆ

ಕೃಷಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಲಂಚ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಪತ್ರ ಬರೆಯಲಾಗಿತ್ತು. ಕೃಷಿ ಇಲಾಖೆ ಸಚಿವರ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ ಆರೋಪದ ಮೇರೆಗೆ ಕೆ.ಆರ್.ಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್​ ಎನ್ನುವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಇದೀಗ ಕೋರ್ಟ್, ಆರೋಪಿಗಳನ್ನು 3 ದಿನ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಕೃಷಿ ಅಧಿಕಾರಿಗಳ ಬಂಧನ ವಿಚಾರಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಾಗೆ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ. ಕೇವಲ ಪತ್ರ ನಕಲಿ ಎಂಬುದು ಗೊತ್ತಾಗಿದೆ. ಅದು ಹೇಗೆ ಭ್ರಷ್ಟಾಚಾರ ಎಂಬುದು ಸಾಬೀತಾಗುತ್ತದೆ? ಇನ್ನಷ್ಟು ತನಿಖೆ ಮಾಡುತ್ತೇವೆ. ಪತ್ರ ಯಾಕೆ ಬರೆದರು? ಯಾರು ಬರೆಸಿದರು? ಅವರೇ ಖುದ್ದಾಗಿ ಬರೆದರಾ ಅಥವಾ ಹಿಂದೆ ಯಾರಾದರೂ ಇದ್ದಾರಾ ಎನ್ನುವುದು ಗೊತ್ತಾಗಲಿದೆ ಎಂದರು.

ಪತ್ರದಲ್ಲೇನಿತ್ತು?

ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದರು. 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿಯುವುದಾಗಿ ದೂರಿನ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುವ ಪತ್ರವೂ ಸಹ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪ್ರಕರಣದ ತನಿಖೆಗೆಯನ್ನು ಸಿಐಡಿಗೆ ವಹಿಸಿತ್ತು.

suddiyaana