ಗುರುವೇ.. ಕೆ.ಎಲ್ ಆಟ ಯಾರು ಬಲ್ಲವರು? ಬಿದ್ದು ಎದ್ದು ಗೆದ್ದ ರಾಹುಲ್
ಪರ್ಫೆಕ್ಟ್ ಮ್ಯಾಚ್ ಫಿನಿಷರ್ ಕನ್ನಡಿಗ

ಗುರುವೇ.. ಕೆ.ಎಲ್ ಆಟ ಯಾರು ಬಲ್ಲವರು? ಬಿದ್ದು ಎದ್ದು ಗೆದ್ದ ರಾಹುಲ್ಪರ್ಫೆಕ್ಟ್ ಮ್ಯಾಚ್ ಫಿನಿಷರ್ ಕನ್ನಡಿಗ

ನ್ಯೂಜಿಲೆಂಡ್ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಟೂರ್ನಿಯ ಸೆಮಿಸ್‌ ಹಾಗೂ ಫೈನಲ್‌ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ಕೆ.ಎಲ್‌ ರಾಹುಲ್‌ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಕೆ.ಎಲ್‌ ರಾಹುಲ್‌ ಫಾರ್ಮ್‌ ಕಳೆದುಕೊಂಡು ಮೂಲೆಗುಂಪಾಗಿದ್ದರು. ಗಾಯದ ಸಮಸ್ಯೆ, ಫಾರ್ಮ್‌ ಕಂಡುಕೊಳ್ಳದೇ ಇದ್ದ ಕಾರಣ 2024ರ ಟಿ20 ವಿಶ್ವಕಪ್‌ ತಂಡಕ್ಕೂ ಆಯ್ಕೆಯಾಗದೇ ಉಳಿದಿದ್ದರು.  ಬಳಿಕ ರಣಜಿ ಟ್ರೋಫಿಯಲ್ಲಿ ಹಾಗೂ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಇಂಗ್ಲೆಂಡ್‌ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಫಾರ್ಮ್‌ ಸಾಬೀತು ಮಾಡುವಲ್ಲಿ ರಾಹುಲ್‌ ವಿಫಲವಾಗಿದ್ದರು. ಇದರಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು..

ರಾಹುಲ್‌ಗೆ ಕಳಪೆ ಪಟ್ಟ ಬಂದಿದ್ದು ಹೇಗೆ?

ನವೆಂಬರ್ 19, 2023ರಲ್ಲಿ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 83 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಆದರೆ 54 ರನ್​ಗಳಿಸಿ ಕೊಹ್ಲಿ ಔಟಾಗುತ್ತಿದ್ದಂತೆ ರಾಹುಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಏಕೆಂದರೆ ಕೊಹ್ಲಿ ಔಟಾದ ಬಳಿಕ ಬಂದ ರವೀಂದ್ರ ಜಡೇಜಾ 9 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದ್ದರು. ಹೀಗಾಗಿ ರಾಹುಲ್ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಅದಾಗಲೇ ಪಂದ್ಯದ ವೇಳೆ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ ಬೌಲರ್​ಗಳು ರಾಹುಲ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಪರಿಣಾಮ 107 ಎಸೆತಗಳನ್ನು ಎದುರಿಸಿ ಕೆಎಲ್ ರಾಹುಲ್ ಕಲೆಹಾಕಿದ್ದು ಕೇವಲ 67 ರನ್​ಗಳು ಮಾತ್ರ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 240 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್​ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಮ್ ಇಂಡಿಯಾದ ಅಂದಿನ ಸೋಲಿಗೆ ಕೆಎಲ್ ರಾಹುಲ್ ಅವರೇ ಕಾರಣ ಎಂದು ಅನೇಕರು ಷರಾ ಬರೆದಿದ್ದರು. ರಾಹುಲ್ ಅವರನ್ನು ಟೀಕಿಸುವ ಭರದಲ್ಲಿ ಉಳಿದ ಬ್ಯಾಟರ್​ಗಳ ವೈಫಲ್ಯಗಳು ಕೂಡ ಮರೆಯಾಯಿತು. ಅಷ್ಟೇ ಯಾಕೆ ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಚಾನ್ಸ್ ನೀಡಬಾರದೆಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರಾಹುಲ್ ಯಶಸ್ವಿಯಾದರು.

5ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕನ್ನಡಿಗನಿಗೆ ಹಿಂಬಡ್ತಿ

ಈ ಬಾರಿ ಕೆಎಲ್ ರಾಹುಲ್​ಗೆ ಸಿಕ್ಕಿದ್ದು 6ನೇ ಕ್ರಮಾಂಕ. ಕಳೆದ ನಾಲ್ಕೈದು ವರ್ಷಗಳಿಂದ 5ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕನ್ನಡಿಗನಿಗೆ ಹಿಂಬಡ್ತಿ ನೀಡಲಾಗಿತ್ತು. ಆದರೆ ಅದ್ಯಾವುದಕ್ಕೂ ರಾಹುಲ್ ತಲೆ ಕೆಡಿಸಿಕೊಳ್ಳಲಿಲ್ಲ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ದೃಢ ನಿರ್ಧಾರ ತೆಗೆದುಕೊಂಡರು. ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲಿ 41 ರನ್​ಗಳ ಕೊಡುಗೆ ನೀಡಿ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 23 ರನ್​ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು. ನಿರ್ಣಾಯಕವಾಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 42 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ನ್ಯೂಝಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೆ ಮೇಲೆ ಹೊತ್ತುಕೊಂಡಂತೆ ಬ್ಯಾಟ್ ಬೀಸಿದರು. ಅಲ್ಲದೆ 33 ಎಸೆತಗಳಲ್ಲಿ ಅಜೇಯ 34 ರನ್ ಬಾರಿಸಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  ಈ ಮೂಲಕ ಕೆಎಲ್ ರಾಹುಲ್ 2023 ರಲ್ಲಿ ತನ್ನ ಬ್ಯಾಟಿಂಗ್ ನೋಡಿ ಬೈದಿದ್ದ ಪ್ರತಿಯೊಬ್ಬರಿಗೂ ಬ್ಯಾಟ್ ಮೂಲಕವೇ ಉತ್ತರ ನೀಡಿದರು. ಅಲ್ಲದೆ ಟೀಮ್ ಇಂಡಿಯಾಗೆ ತನ್ನ ಅವಶ್ಯಕತೆ ಯಾಕಿದೆ ಅನ್ನೋದನ್ನ ತನ್ನ ಬ್ಯಾಟ್ ಮೂಲಕವೇ ಹೇಳಿದ್ರು.. ಇದು ಕನ್ನಡಿ ಕೆ ಎಲ್‌ ರಾಹುಲ್‌ನ ತಾಕತ್ತು.. ಅದಕ್ಕೆ ಹೇಳುವುದು ಒಬ್ಬ ವ್ಯಕ್ತಿ ಬಿದ್ದಾಗ ಅವನ ಮೇಲೆ ಯಾವತ್ತು ಕಲ್ಲು ಎತ್ತಿಹಾಕೋ ಕೆಲಸ ಮಾಡಬಾರದು, ಅವನಿಗೂ ಒಳ್ಳೆಯ ಕಾಲ ಬಂದೇ ಬರುತ್ತೆ..

Kishor KV

Leave a Reply

Your email address will not be published. Required fields are marked *