ಪ್ರಧಾನಿ ಮೋದಿ ಡೀಪ್ ಫೇಕ್ ವಿಡಿಯೋ ವೈರಲ್ – ಗರ್ಬಾ ನೃತ್ಯ ಮಾಡಿದ ವ್ಯಕ್ತಿ ಯಾರು?

ಡೀಪ್ ಫೇಕ್ ವಿಡಿಯೋ ದೇಶಾದ್ಯಂತ ಭಾರಿ ಹಲ್ಚಲ್ ಸೃಷ್ಟಿಸಿದೆ. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡಿ ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳನ್ನು ಮಾತ್ರವಲ್ಲದೇ ಈಗ ರಾಜಕೀಯ ನಾಯಕರನ್ನು ಕೂಡ ಕಿಡಿಗೇಡಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಒಂದೊಂದೇ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಡೀಪ್ ಫೇಕ್ ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ನಾನು ಗರ್ಬಾ ನೃತ್ಯ ಮಾಡುವ ರೀತಿ ಬಿಂಬಿಸಿದ್ದ ಡೀಪ್ಫೇಕ್ ವಿಡಿಯೊವನ್ನು ನಾನೇ ನೋಡಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಬಾ ನೃತ್ಯದ ವಿಡಿಯೋ ವೈರಲ್ ಆಗಿತ್ತು.
ನರೇಂದ್ರ ಮೋದಿ ಅವರನ್ನೇ ಹೋಲುವ ವಿಕಾಸ್ ಮಹಾಂತೆ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರನ್ನೇ ಹೋಲುವ ವಿಕಾಸ್ ಮಹಾಂತೆ ಪ್ರತಿಕ್ರಿಯಿಸಿ, ಗರ್ಬಾ ನೃತ್ಯದಲ್ಲಿ ಕಾಣಿಸಿಕೊಂಡಿರುವುದು ನಾನೇ. ಅದು ಡೀಪ್ ಫೇಕ್ ವಿಡಿಯೊ ಅಲ್ಲ ಎಂದು ಆ ವಿಡಿಯೋದಲ್ಲಿರುವ ವ್ಯಕ್ತಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ಗೆ ಆಹ್ವಾನ – ವಿರೋಧ ವ್ಯಕ್ತವಾಗುತ್ತಿದ್ದಂತೆ ಆಹ್ವಾನ ರದ್ದು!
ನರೇಂದ್ರ ಮೋದಿ ಅವರಂತೆ ನಾನು ಕಾಣುತ್ತಿರುವುದರಿಂದ ದೇಶ-ವಿದೇಶಗಳಿಂದ ನನಗೆ ಆಹ್ವಾನ ಬರುತ್ತದೆ. ನಾನು ಮೋದಿ ಅವರ ಆಲೋಚನೆಗಳು ತಿಳಿಸಲು ಪ್ರಯತ್ನಿಸುತ್ತೇನೆ. ಅದು ಡೀಪ್ ಫೇಕ್ ವಿಡಿಯೋ ಅಲ್ಲ. ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದಿದ್ದಾರೆ.
ಮಹಾರಾಷ್ಟ್ರದ ಮಲಾಡ್ನಲ್ಲಿ ಉದ್ಯಮಿಯಾಗಿರುವ ವಿಕಾಸ್ ಮಹಾಂತೆ ಅವರು ನರೇಂದ್ರ ಮೋದಿ ಅವರನ್ನೇ ಹೋಲುತ್ತಾರೆ. ಈ ಕಾರಣದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರವನ್ನೂ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರು ಆಯೋಜಿಸುವ ಹಲವು ಕಾರ್ಯಕ್ರದ ಉದ್ಘಾಟನೆಯನ್ನು ಇವರೇ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಲಂಡನ್ ಸೇರಿದಂತೆ 8 ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದಾರೆ.
ಮೋದಿ ಬಯೋಪಿಕ್ನಲ್ಲಿ ಇವರು ಅಭಿನಯಸಿದ್ದಾರೆ. ಪ್ರಧಾನಿ ಅನುಮತಿ ನೀಡಿದ ಬಳಿಕ ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾನು ಮೋದಿ ಅವರ ಹಲವು ವಿಡಿಯೋಗಳನ್ನು ವೀಕ್ಷಣೆ ಮಾಡಿ ಮಾತನಾಡಲು ಪ್ರಯತ್ನಿಸಿದರೂ ಅವರ ಧ್ವನಿಯಂತೆ ಮಾತನಾಡಲು ಯಶಸ್ವಿಯಾಗಿಲ್ಲ ಎಂದು ತಿಳಿಸಿದರು.