ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಬಗ್ಗೆ ಎಚ್ಚರವಿರಲಿ – ಚಿಕಿತ್ಸೆಗೆ ತಕ್ಷಣವೇ ಸ್ಪಂದಿಸಲು ಕಣ್ಣಿನ ಆಸ್ಪತ್ರೆಗಳು ಸಜ್ಜು..!
ದೀಪಾವಳಿ ಅಂದರೆ ಬೆಳಕಿನ ಹಬ್ಬ. ಪಟಾಕಿ ಇಲ್ಲದಿದ್ರೆ ದೀಪಾವಳಿ ಹಬ್ಬದ ಗಮ್ಮತ್ತು ಗೊತ್ತೇ ಆಗಲ್ಲ. ಆದರೆ, ಪಟಾಕಿ ಹೊಡೆಯುವ ಖುಷಿಯಲ್ಲಿ ಮಕ್ಕಳ ಕಣ್ಣಿನ ಬಗ್ಗೆ ಎಚ್ಚರಿಕೆ ಬೇಕೇ ಬೇಕು. ಮತ್ತೊಂದೆಡೆ ಹಬ್ಬದ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸ್ಪಂದಿಸಲು ಆಸ್ಪತ್ರೆಗಳು ಕೂಡಾ ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
ಇದನ್ನೂ ಓದಿ:ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ರೂಲ್ಸ್! – ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಭರಾಟೆ ಜೋರಾಗಿಯೇ ಇರುತ್ತದೆ. ಅದರಲ್ಲೂ ಮಕ್ಕಳ ಬಗ್ಗೆ ಎಷ್ಟೇ ಎಚ್ಚರಿಕೆವಹಿಸಿದರೂ ಸಾಕಾಗುವುದಿಲ್ಲ. ಪಟಾಕಿಯಿಂದ ಕಣ್ಣನ್ನು ಸಂರಕ್ಷಿಸಿಕೊಳ್ಳಲೇಬೇಕು. ಒಂದು ವೇಳೆ ಪಟಾಕಿಯಿಂದ ಏನಾದರೂ ಅವಘಟ ಸಂಭವಿಸಿದರೆ ತಕ್ಷಣವೇ ಚಿಕಿತ್ಸೆಗೆ ಸ್ಪಂದಿಸಲು ಆಸ್ಪತ್ರೆಗಳು ಸಜ್ಜಾಗಿವೆ. ಹಬ್ಬದ ಸಮಯದಲ್ಲಿ ದಿನವಿಡೀ ಚಿಕಿತ್ಸೆ ನೀಡಲು ನಗರದ ಮಿಂಟೊ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಸಜ್ಜಾಗಿವೆ.
ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ಮುಂದಿನ ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ. ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಆಸ್ಪತ್ರೆ 15 ಬೆಡ್ಗಳಿರುವ ಪ್ರತ್ಯೇಕ ವಾರ್ಡ್ ಆರಂಭಿಸಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್ಗಳನ್ನ ಮೀಸಲಿರಿಸಿದೆ.
ಪಟಾಕಿ ದುರಂತ ಎದುರಿಸಲು ಮಿಂಟೋ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಔಷಧಿಗಳನ್ನು, ಐ ಡ್ರಾಪ್ಸ್ ಎಲ್ಲವನ್ನು ವಾರ್ಡ್ಗಳಲ್ಲಿ ಶೇಖರಿಸಿದೆ. ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದೆ.
ಕಣ್ಣು ಮಾತ್ರವಲ್ಲದೆ ಪಟಾಕಿಯಿಂದ ಸುಟ್ಟು ಗಾಯವಾದರೇ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರಯಲಾಗುತ್ತಿದೆ. ಪೋಷಕರು ಮತ್ತು ಮಕ್ಕಳು ಎಚ್ಚರಿಕೆಯಿಂದ ಪಟಾಕಿ ಸಿಡಿಸಿ ಅಂತ ವೈದ್ಯರು ಮನವಿ ಮಾಡಿದ್ದಾರೆ. ಅನಾಹುತಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ. ಕಣ್ಣಿನ ಸಮಸ್ಯೆ ಇರುವವರು ಪಟಾಕಿಯಿಂದ ದೂರ ಇರಿ, ಸುರಕ್ಷಿತವಾಗಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ..