ಹೊಸ ವರ್ಷ ಸ್ವಾಗತಿಸಲು ಸಜ್ಜಾದ ನಮ್ಮ ಬೆಂಗಳೂರು – ರಾತ್ರಿ ಎರಡು ಗಂಟೆವರೆಗೆ ಹೆಚ್ಚುವರಿ ಬಸ್ಸುಗಳು, ಮೆಟ್ರೋ ಸಂಚಾರ
ಹೊಸ ವರ್ಷವನ್ನು ಸ್ವಾಗತಿಸಲು ನಮ್ಮ ಬೆಂಗಳೂರು ಸಜ್ಜಾಗಿದೆ. ಹೊಸ ವರ್ಷಾಚರಣೆ ಸಂಭ್ರಮ ಸಿಲಿಕಾನ್ ಸಿಟಿ ರಂಗನ್ನು ಹೆಚ್ಚಿಸಿದೆ. ಇದೇ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಿರುವ ಹಾಗೆ ಭದ್ರತಾ ವ್ಯವಸ್ಥೆಯನ್ನು ಬೆಂಗಳೂರು ನಗರ ಪೊಲೀಸ್ ಮಾಡಿದ್ದಾರೆ. ಬ್ರಿಗೇಡ್ ರಸ್ತೆ, ಎಂಜಿ ರೋಡ್ ಮತ್ತು ಚರ್ಚ್ ಸ್ಟ್ರೀಟ್ಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಸಿಸಿಟಿವಿ ಕ್ಯಾಮರಾ ಜೊತೆಗೆ ಡ್ರೋನ್ ಕ್ಯಾಮರಾಗಳು ಕೂಡಾ ಹದ್ದಿನ ಕಣ್ಣಿಟ್ಟಿವೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ISRO – ಸ್ಪಾಡೆಕ್ಸ್ ಮಿಷನ್ ಯಶಸ್ವಿ ಉಡಾವಣೆ
ಒಂದೆಡೆ ಹೊಸ ವರ್ಷಾಚರಣೆಗೆ ಪೊಲೀಸರು ಸರ್ವಸಿದ್ಧತೆ ಮಾಡಿಕೊಂಡರೆ, ಮತ್ತೊಂದೆಡೆ ಸಾರಿಗೆ ಇಲಾಖೆ ಕೂಡಾ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್ ಸೇವೆಗಳನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಮುಂತಾದ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮೆಟ್ರೋದಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮದ್ಯಪಾನ ಮಾಡಿದ ಪ್ರಯಾಣಿಕರಿಗೆ ಮೆಟ್ರೋ ಪ್ರವೇಶ ನಿಷೇಧಿಸಲಾಗಿದೆ ಮತ್ತು ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು.
ಬೆಂಗಳೂರಿನ ವಿವಿಧ ಭಾಗಗಳಿಂದ ರಾತ್ರಿ ಎರಡು ಗಂಟೆವರೆಗೆ ಹೆಚ್ಚುವರಿ ಬಸ್ಸುಗಳು ಸಂಚಾರ ಮಾಡಲಿವೆ. ಎಂಜಿ ರಸ್ತೆಯಿಂದ ಹೆಚ್ಚುವರಿ ಬಸ್ ಸೌಲಭ್ಯ ಎಂಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿರುವುದಾಗಿ ಬಿಎಂಟಿಸಿ ತಿಳಿಸಿದೆ. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಜನಪ್ರಿಯ ಟೌನ್ಶಿಪ್, ನೆಲಮಂಗಲ, ಯಲಹಂಕ ಉಪನಗರ 5ನೇ ಹಂತ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.