ಬೆಂಗಳೂರು ಗ್ರಾಮಾಂತರದ ನಾಲ್ಕು ನಗರಗಳಿಗೆ ನಮ್ಮ ಮೆಟ್ರೋ ವಿಸ್ತರಣೆ?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಉತ್ತಮ ಸೇವೆ ನೀಡುತ್ತಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಬೆಂಗಳೂರು ನಗರವಷ್ಟೇ ಅಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಕೂಡ ಮೆಟ್ರೋ ಸೇವೆಯ ವಿಸ್ತರಣೆ ಮಾಡಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.
ಮುಖ್ಯಮಂತ್ರಿ ಅವರ ಸಭೆಯಲ್ಲಿಯೇ ಇಂತಹ ಪ್ರಸ್ತಾವನೆ ಕೇಳಿ ಬಂದಿದ್ದು, ಶಾಸಕರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಶೇಷವಾಗಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗಗಳಿಗೆ ಮೆಟ್ರೋ ವಿಸ್ತರಣೆ ನಡೆಸುವುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸ್ಮಾರ್ಟ್ ಫೋನ್!
ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವಂತಹ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ಕೂಡ ಮೆಟ್ರೋ ಸೇವೆ ಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆ ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಪಟ್ಟಣಗಳಿಗೂ ಈ ಸೇವೆ ಮುಂದುವರೆಸುವ ಯೋಚನೆಯನ್ನ ಮಾಡಿದೆ. 2ಎ ಹಾಗೂ 2ಬಿ ಮೆಟ್ರೋ ಯೋಜನೆಯಡಿ ವಿಸ್ತರಣೆಗೊಳ್ಳುವ ಮೆಟ್ರೋ ಸೇವೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಿಸಲಾಗುತ್ತದೆ.
ಸರಕಾರದ ಯೋಜನೆಯಂತೆ ಕಾಮಗಾರಿ ನಡೆದಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ನಗರಗಳಿಗೂ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಆಗಲಿದೆ. ಇದರಿಂದಾಗಿ ಬೆಂಗಳೂರು ಟ್ರಾಫಿಕ್ ದಟ್ಟಣೆ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗುವ ಜೊತೆಗೆ, ಲಕ್ಷಾಂತರ ಮಂದಿಯ ಅನಗತ್ಯ ಪ್ರಯಾಣ ದುಸ್ತರವನ್ನು ಕಡಿಮೆ ಮಾಡಲಿದೆ.
ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ನೇರಳೆ, ಹಸಿರು ಹಾಗೂ ಈ ವರ್ಷಾಂತ್ಯಕ್ಕೆ ಹಳದಿ ಮಾರ್ಗಗಳಲ್ಲಿ ಮೆಟ್ರೋ ಓಡಾಟ ನಡೆಸಲಿದೆ. 2025ರ ವೇಳೆಗೆ ಗುಲಾಬಿ ಬಣ್ಣದ ಮಾರ್ಗವು ಆರಂಭಗೊಳ್ಳಲಿದೆ.