ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ದಿನ ನಮ್ಮ ರೈಲು ಸೇವೆಯ ಅವಧಿ ವಿಸ್ತರಣೆ

ಐಪಿಎಲ್ ಫಿವರ್ ಶುರುವಾಗಿದೆ. ಶುಕ್ರವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆರಂಭವಾಗಿದೆ. ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ.
ಈ ಕುರಿತು ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ, ಮಾರ್ಚ್ 25, 29 ಮತ್ತು ಏಪ್ರಿಲ್ 02 ರಂದು ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30 ಕ್ಕೆ ವಿಸ್ತರಿಸಲಿದೆ. ಈ ಪಂದ್ಯದ ದಿನಗಳಲ್ಲಿ, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ರೂ, 50/- ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್ಕೆ ಹವಾ?
ಇನ್ನು ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಮೆಟ್ರೋ ಟೋಕನ್ ಲಭ್ಯವಿರುವುದಿಲ್ಲ ಎಂದು ಹೇಳಿದೆ.
ಅಂತೆಯೇ ಎಂದಿನಂತೆ, ಕ್ಯೂಆರ್ ಕೋಡ್ ಟಿಕೆಟ್ಗಳು, ಸ್ಮಾರ್ಟ್ ಕಾರ್ಡ್ಗಳು ಮತ್ತು ಎನ್ ಸಿಎಂಸಿ ಕಾರ್ಡ್ಗಳನ್ನು ಸಹ ಬಳಸಬಹುದು. ವಾಟ್ಸಪ್/ನಮ್ಮ ಮೆಟ್ರೋ ಅ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್ ಕೋಡ್ ಟಿಕೆಟ್ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ.