ಗೋಲ್ಡನ್ ಟೆಂಪಲ್ ಬಳಿ ಮತ್ತೊಂದು ಸ್ಪೋಟ – 5 ದಿನಗಳಲ್ಲಿ ಮೂರನೇ ಪ್ರಕರಣ
ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರದ ಬಳಿ ಗುರುವಾರ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಮತ್ತೊಂದು ಸ್ಟೋಟ ಸಂಭವಿಸಿದೆ. ಇದು ಕಳೆದ ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಟೋಟವಾಗಿದೆ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದಷ್ಟೇ ಸ್ವರ್ಣ ಮಂದಿರದ ಬಳಿ ಎರಡನೇ ಸ್ಟೋಟ ಸಂಭವಿಸಿತ್ತು. ಇದಾದ ಎರಡೇ ದಿನಕ್ಕೆ ಮೂರನೇ ಸ್ಟೋಟ ಸಂಭವಿಸಿದೆ. ಸರಣಿ ಬಾಂಬ್ ಸ್ಟೋಟದಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಸ್ಟೋಟಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ – ಮಂಗಳೂರಿನ 5 ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144
ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಯಾವುದೇ ಹಾನಿ, ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಸ್ಫೋಟಕ್ಕೆ ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಮೃತಸರ ಪೊಲೀಸ್ ಆಯುಕ್ತ ನೌನಿಹಾಲ್ ಸಿಂಗ್ ತಿಳಿಸಿದ್ದಾರೆ.
ಸ್ವರ್ಣ ಮಂದಿರದಲ್ಲಿ ಮೇ 6 ರಂದು ಮೊದಲ ಸ್ಫೋಟ ಸಂಭವಿಸಿದ್ದು, ಕಳೆದ ಸೋಮವಾರ ಎರಡನೆ ಸ್ಫೋಟ ಸಂಭವಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮತ್ತು ಪಂಜಾಬ್ ಪೊಲೀಸರು ಸ್ಫೋಟದ ಸ್ಥಳದಲ್ಲಿ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದರು. ಸ್ಥಳದಲ್ಲಿ ಯಾವುದೇ ಡಿಟೋನೇಟರ್ ಪತ್ತೆಯಾಗಿಲ್ಲ. ಆದರೆ ಸ್ಫೋಟಕ್ಕೆ ಬಳಸಿದ ಡಿಟೋನೇಟರ್ ಅನ್ನು ಕಂಟೇನರ್ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.