ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುದೀಕರಣ ಕಾಮಗಾರಿ – ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ ಬಿಎಂಆರ್‌ಸಿಎಲ್
ಸಿಲಿಕಾನ್ ಸಿಟಿ ಬೆಂಗಳೂರು ಜನರು ಸಂಚಾರಕ್ಕಾಗಿ ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಬಿಎಂಆರ್‌ಸಿಎಲ್ ಮೆಟ್ರೋ ಮಾರ್ಗವನ್ನು ಹಂತ ಹಂತವಾಗಿ ವಿಸ್ತರಿಸುತ್ತಿದೆ. ಸದ್ಯ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಪ್ರಾಯೋಗಿಕ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್ ಫ್ಲಾಟ್‌ಫಾರಂ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದ ಕೊನೆಯವರೆಗೆ ಮೆಟ್ರೋ ವಯಡಕ್ಟ್‌ಗಳನ್ನು ಪ್ರವೇಶಿಸದಂತೆ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಒಂದಾಗುತ್ತಿದೆ ನಮ್ಮ ಯಾತ್ರಿ ಮತ್ತು ಬಿಎಂಆರ್‌ಸಿಎಲ್!
ಪ್ರಾಯೋಗಿಕ ವಿದ್ಯುದ್ದೀಕರಣ ಸಂದರ್ಭದಲ್ಲಿ ಅಪಾಯಕಾರಿ ಮಟ್ಟದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಮೆಟ್ರೋ ವಯಡಕ್ಟ್ ಮೂಲಕ 33 ಕೆವಿ ವಿದ್ಯುತ್ ಕೇಬಲ್‌ಗಳು ಹಾದು ಹೋಗಿವೆ. ಬಿಟಿಎಂ ಲೇಔಟ್ ನಿಲ್ದಾಣ, ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ ಮತ್ತು ಆರ್‌ವಿ ರಸ್ತೆ ನಿಲ್ದಾಣದವರೆಗೂ 750 ವೋಲ್ಟ್‌ಗಳ ವಿದ್ಯುತ್ ಸರಬರಾಜು ಆಗುತ್ತದೆ. ಈ ವೇಳೆ ವಯಡಕ್ಟ್ ಪ್ರವೇಶಿಸಿದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು.
ಹೆಬ್ಬಗೋಡಿ ಡಿಪೋ ವಿಭಾಗದಿಂದ ಬೊಮ್ಮಸಂದ್ರ ನಿಲ್ದಾಣದವರೆಗೆ ಹಾಗೂ ಆರ್.ವಿ.ರಸ್ತೆ ನಿಲ್ದಾಣದವರೆಗೂ 16 ನಿಲ್ದಾಣಗಳಲ್ಲಿ ವಿದ್ಯುತ್ ಪ್ರವಹಿಸಲಿದೆ. ಈ ನಿಲ್ದಾಣಗಳಿಗೆ ಅಥವಾ ಮಾರ್ಗದ ವಯಾಡಕ್ಟ್‌ಗಳಿಗೆ ಪ್ರವೇಶದಿಂದ ಮಾರಣಾಂತಿಕ ಅಪಾಯ ಉಂಟಾಗಬಹುದು. ಹೀಗಾಗಿ, ಅನುಮತಿಯಿಲ್ಲದೆ ಪ್ರವೇಶಿಸದಂತೆ ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.