ಟೊಮ್ಯಾಟೊಗೆ ಬಂಪರ್ ಬೆಲೆ ಎಂದು ಅಗತ್ಯಕ್ಕಿಂತ ಹೆಚ್ಚು ಕೀಟನಾಶಕ ಬಳಕೆ – ಆತಂಕ ವ್ಯಕ್ತಪಡಿಸಿದ ವೈದ್ಯರು
ಸೆಂಚುರಿ, ಡಬಲ್ ಸೆಂಚುರಿ ಅಂತಾ ಟೊಮ್ಯಾಟೊ ಬೆಲೆ 200ರ ಗಡಿ ದಾಟಿದೆ. ರಾಷ್ಟ್ರವ್ಯಾಪಿ ಟೊಮ್ಯಾಟೊ ಹಣ್ಣಿನ ದರ ಹೆಚ್ಚಳದಿಂದ ಆಮದು ಮಾಡಿಕೊಳ್ಳುವುದೂ ಕೂಡ ಕಷ್ಟವಾಗುತ್ತಿದೆ. ಹೊಸ ಬೆಳೆ ಬರುವವರೆಗೂ ಈ ಬೆಲೆ ಏರಿಕೆ ಇರಲಿದೆ. ಹೀಗೆ ಬಂಗಾರದ ಬೆಲೆ ಬಂದಿರುವ ವೇಳೆ ತಮ್ಮ ಟೊಮ್ಯಾಟೊ ಗಿಡಗಳನ್ನ ರಕ್ಷಣೆ ಮಾಡಿಕೊಳ್ಳಲು ರೈತರು ಅಧಿಕ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದು ಆತಂಕಕಾರಿ ಬೆಳೆವಣಿಗೆಯಾಗಿದೆ.
ಇದನ್ನೂ ಓದಿ : ಗ್ರಾಹಕರ ಜೇಬು ಸುಡಲಿದೆ ಹೋಟೆಲ್ ಬಿಲ್! – ಆಷಾಢ ಮುಗಿಯುತ್ತಿದ್ದಂತೆ ತಿಂಡಿ, ಊಟದ ದರ ಏರಿಕೆ?
ಹಲವು ಕಾರಣಗಳಿಂದ ಈ ಬಾರಿ ಟೊಮ್ಯಾಟೊ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಬರುವಂತಹ ಟೊಮ್ಯಾಟೊ ಪ್ರಮಾಣ ಶೇ.60ರಷ್ಟು ಇಳಿಮುಖವಾಗಿದೆ. ಜೊತೆಗೆ ಉತ್ತರ ಭಾರತದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಟೊಮ್ಯಾಟೊ ಇಳುವರಿ ಬಂದಿಲ್ಲ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ಗಗನಮುಖಿಯಾಗಿದೆ. ಹೀಗಾಗಿ ಟೊಮ್ಯಾಟೊ ಬೆಳೆದಿರುವ ರೈತರು ಬೆಳೆ ರಕ್ಷಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತಹ ಅನಿವಾರ್ಯತೆ ಎದುರಾಗಿದ್ದು, ಕೀಟಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಾವಯವ ವಿಧಾನಗಳ ಬದಲಿಗೆ ಕೀಟನಾಶಕಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
ಸತತ ನಷ್ಟದಿಂದಾಗಿ ಹೈರಾಣಾಗಿದ್ದಂತಹ ರೈತರು ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆ ರಕ್ಷಿಸಿಕೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೀಟನಾಶಕಗಳ ಬಳಕೆಗೆ ಮುಂದಾಗಿದ್ದಾರೆ. ಕೀಟಬಾಧೆಯ ಲಾಭ ಪಡೆಯಲು ಮುಂದಾಗಿರುವಂತಹ ಕೀಟನಾಶಕ ಅಂಗಡಿಗಳ ಮಾಲೀಕರು ಸಹ ಹೆಚ್ಚು ಹೆಚ್ಚು ಕೀಟನಾಶಕಗಳ ಬಳಕೆಗೆ ರೈತರನ್ನು ಪ್ರೋತ್ಸಾಹಿಸುತ್ತಿದ್ದು, ಹೊಸ ಹೊಸ ರಾಸಾಯನಿಕಗಳನ್ನು ರೈತರಿಗೆ ನೀಡುತ್ತಿದ್ದಾರೆ. ಕೀಟಗಳಿಂದ ಬೆಳೆ ರಕ್ಷಣೆಗಾಗಿ ರೈತರು ಸಿಂಪಡಣೆ ಮಾಡುವ ಕೀಟನಾಶಕಗಳಲ್ಲಿರುವ ರಾಸಾಯನಿಕ ಅಂಶಗಳು ಟೊಮ್ಯಾಟೊ ಹಣ್ಣಿನ ಒಳ ಹಾಗೂ ಹೊರ ಭಾಗದಲ್ಲಿ ಕನಿಷ್ಠ 7-15 ದಿನಗಳವರೆಗೆ ಇರುತ್ತವೆ. ಹಣ್ಣುಗಳನ್ನು ತೊಳೆದರೂ ರಾಸಾಯನಿಕಗಳು ಹಣ್ಣಿನ ಒಳಭಾಗದಲ್ಲಿರುತ್ತವೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
15 ಕೆಜಿ ಟೊಮ್ಯಾಟೊ ಬಾಕ್ಸ್ 2,000 ರೂ.ಗಳ ಗಡಿ ದಾಟಿದ್ದು, ಕೆಲ ದಿನಗಳಿಂದ ಬಾಕ್ಸ್ ಬೆಲೆ 1600-2000 ರೂ.ಗಳವರೆಗೆ ಹರಾಜಾಗುತ್ತಿದೆ. ಅದರ ಲಾಭ ಪಡೆಯಲು ರೈತರು ನಿಗದಿಗಿಂತಲೂ ಹೆಚ್ಚಿನ ಕೀಟನಾಶಕ ಬಳಸುತ್ತಿದ್ದು, ಕೊಯ್ಲಿಗೆ ಒಂದೆರೆಡು ದಿನ ಇರುವಾಗಲೂ ಮುಂಜಾಗ್ರತಾ ಕ್ರಮವಾಗಿ ಕೀಟನಾಶಕ ಸಿಂಪಡಿಸುತ್ತಿರುವುದು ಆಘಾತಕಾರಿ ವಿಚಾರವಾಗಿದೆ.
ತರಕಾರಿ ಬೆಳೆಗಳಿಗೆ ಬರುವಂತಹ ರೋಗಗಳ ತಡೆಗೆ ಸಿಂಪಡಣೆ ಮಾಡುವಂತಹ ರಾಸಾಯನಿಕಗಳ ಅಂಶಗಳು ತರಕಾರಿಗಳ ಮೇಲೆ ಕನಿಷ್ಠ 5-7 ದಿನಗಳವರೆಗೆ ಇರುತ್ತವೆ. ಹೀಗಾಗಿ ರೈತರು ಕೊಯ್ಲಿಗೆ ಒಂದೆರೆಡು ದಿನಗಳಿರುವಾಗ ಕೀಟನಾಶಕ ಸಿಂಪಡಿಸುವುದು ಸರಿಯಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.