ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ – 44 ಮಂದಿ ಪೊಲೀಸರ ವಶಕ್ಕೆ

ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ – 44 ಮಂದಿ ಪೊಲೀಸರ ವಶಕ್ಕೆ

ರಾಜಸ್ಥಾನ: 2022 ರ 2ನೇ ದರ್ಜೆಯ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಆರ್ ಪಿಎಸ್ ಸಿ 2ನೇ ದರ್ಜೆಯ ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆ ಪತ್ರಿಕೆ ಪತ್ರಿಕೆ ಸೋರಿಕೆಯಾಗಿದೆ.  ಬಳಿಕ ಈ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿ, ಉದಯಪುರ ಪೊಲೀಸರು  44 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರವೇಶಿಸಿದ ಭಾರತ್ ಜೋಡೋ – ಬಿಜೆಪಿ ನಾಯಕರಿಗೆ ಬಹಿರಂಗ ಆಹ್ವಾನ ನೀಡಿದ ಕಾಂಗ್ರೆಸ್

ರಾಜಸ್ಥಾನದ ಜಾಲೋರ್ ನಿಂದ ಉದಯಪುರಕ್ಕೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಕೊಟ್ಟು  ಬಸ್ ನಲ್ಲಿ ಅಭ್ಯರ್ಥಿಗಳನ್ನು ಕರೆದೊಯ್ಯುತ್ತಿದ್ದರು. ಈ ವೇಳೆ‌ ಖಚಿತ ಮಾಹಿತಿ ಆಧರಿಸಿ ಪೊಲೀಸರು ಬಸ್ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಎಲ್ಲರ ಕೈಯಲ್ಲೂ ಪ್ರಶ್ನೆ ಪತ್ರಿಕೆಗಳು ಲಭಿಸಿವೆ ಎಂದು ರಾಜಸ್ಥಾನ ಪೊಲೀಸರು ಹೇಳಿದ್ದಾರೆ.

ಮೂಲಗಳ ಪ್ರಕಾರ, ವಶಕ್ಕೆ ಪಡೆಯಲಾದ ಹೆಚ್ಚಿನ ಆರೋಪಿಗಳು ರಾಜಸ್ಥಾನದ ಸಿರೋಹಿ ಮತ್ತು ಜಲೋರ್ ಜಿಲ್ಲೆಯವರಾಗಿದ್ದು, ಮಾಸ್ಟರ್ ಮೈಂಡ್ ಜೋಧ್‌ಪುರದವರು ಎನ್ನಲಾಗಿದೆ.

ಸಂಸದ ಹನುಮಾನ್ ಬೇನಿವಾಲ್ ಈ ಕುರಿತು ಟ್ವೀಟ್ ಮಾಡಿದ್ದು, “2022 ರ 2ನೇ ದರ್ಜೆಯ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಬರುತ್ತಿದ್ದು, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದೆ. ಇದರಿಂದ ಶ್ರಮಜೀವಿಗಳ ಕನಸಿಗೆ ಧಕ್ಕೆಯಾಗಿದೆ. ಇದಕ್ಕೆ ರಾಜಸ್ಥಾನ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ” ಎಂದು ಕಿಡಿಕಾರಿದ್ದಾರೆ.

ಇತ್ತೀಚಿನ‌ ದಿನಗಳಲ್ಲಿ‌ ಸರ್ಕಾರಿ ನೇಮಕಾತಿ ವೇಳೆ ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತಿವೆ. ಇದಕ್ಕೆ ಸಾರ್ವಜನಿಕರು ಹಾಗೂ ಪರೀಕ್ಷೆ ಬರೆಯಲು ತಯಾರಿ‌ ನಡೆಸಿದ ನಿಷ್ಠಾವಂತ ಅಭ್ಯರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್ ನಲ್ಲೂ #RPSC ಟ್ರೆಂಡಿಂಗ್‌ನಲ್ಲಿದ್ದು ಜನರು ಪೇಪರ್ ಲೀಕ್‌ಗೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

suddiyaana