ಮೂರು ಕೊಲೆ.. ಮೃತ ವ್ಯಕ್ತಿಯೇ ಅರೆಸ್ಟ್‌! – ಆ ಒಂದು ಸುಳಿವಿನಿಂದ 20 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!  

ಮೂರು ಕೊಲೆ.. ಮೃತ ವ್ಯಕ್ತಿಯೇ ಅರೆಸ್ಟ್‌! – ಆ ಒಂದು ಸುಳಿವಿನಿಂದ 20 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!  

ಅದು ಸುಮಾರು 20 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣ. ತನ್ನ ಕರ್ಮಕಾಂಡಗಳನ್ನು ಮುಚ್ಚಿಹಾಕಲು ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಬಳಿಕ ಆತ ಸೇಫ್‌ ಆಗಲು ಮತ್ತೆರಡು ಕೊಲೆ ಮಾಡಿ, ತಾನೇ ಸತ್ತಿದ್ದೇನೆ ಅಂತಾ ಬಿಂಬಿಸಿದ್ದಾನೆ. ಆತನ ಅಪರಾಧಗಳ ಕತೆಯನ್ನು ತಿಳ್ಕೊಳ್ಳುತ್ತಾ ಹೋದ್ರೆ ಕ್ರೈಂ ಥ್ರಿಲ್ಲರ್ ಸಿನಿಮಾದಂತೆ ಭಾಸವಾಗುತ್ತದೆ.  ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಖಳನಾಯಕ ಕೊನೆಗೂ ಅಂದರ್‌ ಆಗಿದ್ದಾನೆ. ಈತನ ಬಂಧನದಿಂದಾಗಿ ಪೊಲೀಸರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಏನಿದು ಪ್ರಕರಣ?

2004ರಲ್ಲಿ ದಿಲ್ಲಿಯ ಬವಾನಾ ಸ್ಥಳದಲ್ಲಿ ನಡೆದ ಕೊಲೆಯೊಂದು ನಡೆದಿತ್ತು. ಆ ವ್ಯಕ್ತಿಯನ್ಜು ಉಸಿರುಗಟ್ಟಿಸಿ ಬರ್ಬರವಾಗಿ ಕೊಲ್ಲಲಾಗಿತ್ತು. ಈ ಕೊಲೆಯನ್ನು ಮುಚ್ಚಿಹಾಕಲು ಇನ್ನಿಬ್ಬರಿಗೆ ಬೆಂಕಿ ಹಚ್ಚಿದ್ದ ಈತ, ತಾನು ಸತ್ತಿರುವುದಾಗಿ ಸುಳ್ಳು ಸುದ್ದಿ ಹರಡಿಸಿದ್ದ. ಅಂದಿನಿಂದ ನಕಲಿ ಹೆಸರು, ಗುರುತಿನಲ್ಲಿಯೇ ಬದುಕುತ್ತಿದ್ದ. ಇದೆಲ್ಲ ನಡೆದಿತ್ತು ಸುಮಾರು 20 ವರ್ಷಗಳ ಹಿಂದೆ. ಇದೀಗ ಈ ಪ್ರಕರಣದಲ್ಲಿ ಬೇಕಾಗಿರುವ ವ್ಯಕ್ತಿ ಬದುಕಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಇದೀಗ ದೆಹಲಿಯಿಂದ ಸುಮಾರು 30 ಕಿಮೀ ದೂರದ ನಜಾಫಗಡದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

ಸುಮಾರು ಇಪ್ಪತು ವರ್ಷಗಳ ಹಿಂದೆ ಈ ಪ್ರಕರಣದ ಆರೋಪಿ ಬಾಲೇಶ್ ಕುಮಾರ್ ತನ್ನ ಹೆಸರನ್ನು ಅಮನ್ ಸಿಂಗ್ ಎಂದು ಬದಲಿಸಿಕೊಂಡಿದ್ದ. ಆತ ಆಸ್ತಿ ಡೀಲರ್ ಆಗಿ ಕೆಲಸ ಮಾಡುತ್ತಿದ್ದ. ಈ ಪ್ರಕರಣದ ಆರೋಪಿ ಬದುಕಿದ್ದಾನೆ ಅಂತಾ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಜಾಡು ಹಿಡಿದು ಹೋದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 60 ವರ್ಷದ ಬಾಲೇಶ್ ಕುಮಾರ್‌ ಎಂಬಾತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಮಾರಂಭವೊಂದರಲ್ಲಿ ಸಚಿವರ ಕಾಲ ಕೆಳಗೆ ರಾಶಿ ರಾಶಿ ನೋಟು – ಶಿವಾನಂದ ಪಾಟೀಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

ವಿಚಾರಣೆ ವೇಳೆ ಸ್ಪೋಟಕ ವಿಚಾರ ಬಹಿರಂಗ!

ಬಾಲೇಶ್‌ನನ್ನು ಬಂಧಿಸಿದ ಬಳಿಕೆ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.  ಈ ವೇಳೆ ಎದೆನಡುಗಿಸುವ ವಿಷಯಗಳು ಬೆಳಕಿಗೆ ಬಂದಿವೆ. ಹರ್ಯಾಣ ಮೂಲದ ಕುಮಾರ್, 8ನೇ ತರಗತಿವರೆಗೆ ಓದಿದ್ದ. 1981ರಲ್ಲಿ ನೇವಿ ಸೇರಿದ್ದ ಆತ, 1996ರಲ್ಲಿ ನಿವೃತ್ತನಾಗಿದ್ದ. ಬಳಿಕ ಸಾರಿಗೆ ಉದ್ಯಮ ಆರಂಭಿಸಿ, ದಿಲ್ಲಿಯ ಉತ್ತಮ ನಗರದಲ್ಲಿ ತನ್ನ ಕುಟುಂಬದ ಜತೆ ವಾಸವಾಗಿದ್ದ.

2004ರಲ್ಲಿ ದಿಲ್ಲಿಯ ಸಮಯಪುರ ಬದ್ಲಿಯಲ್ಲಿ ತಾನು ಹಾಗೂ ತನ್ನ ಸಹೋದರ ಸುಂದರ್ ಲಾಲ್ ಸೇರಿಕೊಂಡು ರಾಜೇಶ್ ಎಂಬಾತನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಕುಮಾರ್ ತಿಳಿಸಿದ್ದಾನೆ. ಮೂವರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಕುಮಾರ್ ಹಾಗೂ ರಾಜೇಶ್ ಹೆಂಡತಿ ನಡುವಿನ ಅನೈತಿಕ ಸಂಬಂಧದ ವಿಚಾರ ಆಗ ಮುನ್ನೆಲೆಗೆ ಬಂದಿತ್ತು. ಇದು ವಾಗ್ವಾದಕ್ಕೆ ತಿರುಗಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಮದ್ಯದ ಅಮಲಿನಲ್ಲಿದ್ದ ಕುಮಾರ್ ಹಾಗೂ ಆತನ ಸಹೋದರ ಇಬ್ಬರೂ ಸೇರಿ, ರಾಜೇಶ್‌ನ ಕಥೆ ಮುಗಿಸಿದ್ದರು.

ತಪ್ಪಿಸಿಕೊಳ್ಳಲು ಸಾವಿನ ನಾಟಕ

ನಶೆ ಇಳಿದ ನಂತರ ಕುಮಾರ್‌ಗೆ ವಾಸ್ತವ ಅರಿವಾಗಿತ್ತು. ಇದರ ನಂತರ ಆತ ತಪ್ಪಿಸಿಕೊಳ್ಳುವ ಯೋಜನೆ ರೂಪಿಸಿದ. ದಿಲ್ಲಿಯ ಸಮಯಪುರ ಬದ್ಲಿಯಲ್ಲಿದ್ದ ಬಿಹಾರ ಮೂಲದ ಮನೋಜ್ ಮತ್ತು ಮುಕೇಶ್ ಎಂಬ ಇಬ್ಬರು ಕಾರ್ಮಿಕರಿಗೆ ಕೆಲಸದ ಭರವಸೆ ನೀಡಿ ಕರೆಸಿಕೊಂಡಿದ್ದ. ಕುಮಾರ್‌ನ ಸಹೋದರನಿಗೆ ಸೇರಿದ ಟ್ರಕ್‌ನಲ್ಲಿ ಮೂವರೂ ರಾಜಸ್ಥಾನದ ಕಡೆ ತೆರಳಿದ್ದರು. ಜೋಧಪುರದಲ್ಲಿ ಕಾರ್ಮಿಕರು ಒಳಗಿರುವಾಗಲೇ ಟ್ರಕ್‌ಗೆ ಬೆಂಕಿ ಹಚ್ಚಿದ್ದ. ಟ್ರಕ್ ಒಳಗೆ ತನ್ನ ಗುರುತಿನ ಕೆಲವು ದಾಖಲೆಗಳನ್ನು ಇರಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರಿಗೆ ಸುಟ್ಟು ಕರಕಲಾಗಿದ್ದ ಎರಡು ದೇಹಗಳು ದೊರಕಿದ್ದವು. ದಾಖಲೆಗಳನ್ನು ಕಂಡ ಪೊಲೀಸರು, ಅವುಗಳಲ್ಲಿ ಒಂದು ಕುಮಾರ್ ದೇಹ ಎಂದು ಗುರುತಿಸಿದ್ದರು. ಇನ್ನೊಂದು ದೇಹದ ಗುರುತು ಪತ್ತೆಯಾಗಿರಲಿಲ್ಲ. ಆತನ ತಂದೆ ಚಂದ್ರಬಾನ್, ಮಗನ ಮೃತದೇಹವನ್ನು ಗುರುತಿಸಿದ್ದರು.

ರಾಜೇಶ್‌ನ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಸುಂದರ್ ಲಾಲ್‌ನನ್ನು ಬಂಧಿಸಲಾಗಿತ್ತು. ಕುಮಾರ್ ಟ್ರಕ್‌ನಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಸತ್ತಿದ್ದಾನೆ ಎಂದು ಕೋರ್ಟ್‌ಗೆ ಪೊಲೀಸರು ತಿಳಿಸಿದ್ದರು.

ನಕಲಿ ದಾಖಲೆ ಕೊಟ್ಟು ವಿಮೆ, ಪಿಂಚಣಿ ಪಡೆದ ಹೆಂಡತಿ

ಕುಮಾರ್‌ನ ಪಿಂಚಣಿ ಹಣ ಮತ್ತು ಜೀವ ವಿಮಾದ ಎಲ್ಲಾ ಮೊತ್ತ ಆತನ ಹೆಂಡತಿಗೆ ಸಿಕ್ಕಿತ್ತು. ಟ್ರಕ್‌ನ ವಿಮೆ ಮೊತ್ತ ಕೂಡ ಆತನ ಹೆಂಡತಿ ಖಾತೆಗೆ ಬಂದಿತ್ತು. ಕುಮಾರ್‌ನ ಹಿಂದಿನ ಗುರುತು ಹಾಗೂ ಅಪರಾಧಗಳು ಬಹುತೇಕ ಮುಚ್ಚಿ ಹೋಗಿದ್ದವು. ಆತನನ್ನು ಎಲ್ಲರೂ ಮರೆತುಹೋಗಿದ್ದರು. ಆದರೆ ಸುಮಾರು 20 ವರ್ಷಗಳ ಬಳಿಕ ಆತನ ಅದೃಷ್ಟ ಕೈಕೊಟ್ಟಿದೆ.

2011ರಲ್ಲಿ ಆತ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ದಿಲ್ಲಿ ಹೊರವಲಯದ ನಜಾಫಗಡಕ್ಕೆ ಸ್ಥಳಾಂತರ ಮಾಡಿಸುವಲ್ಲಿ ಯಶಸ್ವಿಯಾಗಿದ್ದ. ಕುಮಾರ್ ಸತ್ತಿದ್ದಾನೆ ಎಂದೇ ಎಲ್ಲರೂ ನಂಬಿದ್ದರಿಂದ, ಸಮಯ ಕಳೆದಂತೆ ಆತನನ್ನು ಎಲ್ಲರೂ ಮರೆತಿದ್ದಾರೆ ಎಂದು ಪತ್ನಿಗೆ ಅರಿವಾಗಿತ್ತು. ಆತ ಸಿಕ್ಕಿಬೀಳುವ ಸಾಧ್ಯತೆ ಕಡಿಮೆಯಾಗಿದ್ದರಿಂದ, ಮಕ್ಕಳ ಜತೆ ಆತನ ಜತೆಗೆ ವಾಸಿಸಲು ಆರಂಭಿಸಿದ್ದಳು. ಕುಮಾರ್, ಅಮನ್ ಸಿಂಗ್ ಹೆಸರಿನಲ್ಲಿ ವ್ಯವಹರಿಸುತ್ತಿದ್ದರೆ, ಆತನ ಹೆಂಡತಿ ಮತ್ತು ಮಕ್ಕಳು ಮೂಲ ಹೆಸರನ್ನೇ ಹೊಂದಿದ್ದರು. ಕುಮಾರ್‌ನ ಹೆಂಡತಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾಳೆ. ಈ ಹೊಸ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ದಿಲ್ಲಿ ಪೊಲೀಸರು ಟ್ರಕ್ ಬೆಂಕಿ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಜೋಧಪುರ ಪೊಲೀಸರಿಗೆ ಮನವಿ ಮಾಡಿದ್ದಾರೆ.

Shwetha M