ಮಹಿಳೆಯರು ಶನಿಪೂಜೆ ಮಾಡಬಹುದೇ..?- ಶನಿದೋಷಕ್ಕೆ ಪರಿಹಾರ ಏನು?

ಮಹಿಳೆಯರು ಶನಿಪೂಜೆ ಮಾಡಬಹುದೇ..?-  ಶನಿದೋಷಕ್ಕೆ ಪರಿಹಾರ ಏನು?

ಇಂದು ಶನಿವಾರದ ಶುಭ ದಿನ. ಈ ದಿನ ಭಗವಾನ್‌ ಶನಿಯನ್ನು ಪೂಜಿಸಲಾಗುತ್ತದೆ. ಶನಿದೇವನನ್ನು ಪೂಜೆಯ ಮೂಲಕ ಸಂತೋಷಗೊಳಿಸಲು, ಆತನ ಆಶೀರ್ವಾದವನ್ನು ಪಡೆದುಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ.

ನಾವು ಮಾಡಿದ ಪಾಪ – ಕರ್ಮಗಳಿಗೆ ತಕ್ಕ ಶಿಕ್ಷೆಯನ್ನು ನೀಡುವವನು ಕೇವಲ ಭಗವಾನ್‌ ಶನಿ ಮಾತ್ರ. ಶನಿ ದೇವನೆಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಭಯ ಹುಟ್ಟುತ್ತದೆ. ಯಾಕೆಂದರೆ ಶನಿ ದೇವನ ವಕ್ರದೃಷ್ಟಿ ನಮ್ಮ ಮೇಲೆ ಬಿದ್ದರೆ ರಾಜನಾಗಿದ್ದವನು ಕೂಡ ಭಿಕ್ಷಕನಾಗಬಲ್ಲ. ರಾಶಿ ಚಕ್ರದಲ್ಲಿ ಶನಿಯು ಕುಂಭ ರಾಶಿ ಅಧಿಪತಿ. ಮತ್ತು ಶನಿವಾರದಂದು ಈತನನ್ನು ಪೂಜಿಸಲಾಗುತ್ತದೆ. ಶನಿಯನ್ನು ಪೂಜಿಸುವಾಗ ನಾವು ಒಂದು ಸಣ್ಣ ತಪ್ಪು ಮಾಡಿದರೂ ಆತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಶನಿವಾರದಂದು ಶನಿಯನ್ನು ಪೂಜಿಸುವಾಗ ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಏನು ತಪ್ಪಾಗದಂತೆ ಶನಿಯನ್ನು ಪೂಜಿಸಿ.

ಸಾಮಾನ್ಯವಾಗಿ ಎಲ್ಲರೂ ಶನಿದೇವನನ್ನು ಪೂಜಿಸುತ್ತಾರೆ. ಆದರೆ ಶನಿದೇವನನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಿಸಬಹುದೇ ಎನ್ನುವುದು ದೊಡ್ಡ ಪ್ರಶ್ನೆ. ಹೌದು, ಸಹಜವಾಗಿ ಪುರಾಣಗಳಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಮಹಿಳೆಯರು ಶನಿ ದೇವನನ್ನು ಪೂಜಿಸುವಾಗ ಮುಟ್ಟಬಾರದು ಮತ್ತು ತೈಲವನ್ನು ಅರ್ಪಿಸಬಾರದು. ಮಹಿಳೆಯರು ಶನಿ ಪೂಜೆಯಲ್ಲಿ ಈ ಕ್ರಮಗಳನ್ನು ಅನುಸರಿಸಿದರೆ ಆತನು ನಿಮ್ಮ ಮೇಲೆ ಕೋಪಿಸಿಕೊಳ್ಳುವನು. ಆದರೆ ಶನಿಯ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ಹಾಗೂ ಶನಿದೇವನ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುವವರು ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಚಕರ ಸಲಹೆಯ ಮೇರೆಗೆ ಶನಿಯನ್ನು ಪೂಜಿಸಬಹುದು.

ನೀವು ಶನಿವಾರದಂದು ಅಥವಾ ಶನಿಯನ್ನು ಪೂಜಿಸುವಾಗ ಪೂಜೆಗೆ ಅವಶ್ಯಕ ಸಾಮಾಗ್ರಿಗಳನ್ನು ಯಾವ ಲೋಹದ ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕೆಂಬುದರತ್ತ ಗಮನಹರಿಸಬೇಕು. ಶನಿದೇವನಿಗೆ ಪೂಜೆಗೆ ಬಳಸುವ ವಸ್ತುಗಳನ್ನು ಎಂದಿಗೂ ತಾಮ್ರದ ಪಾತ್ರೆಯಲ್ಲಿ ಇಟ್ಟುಕೊಳ್ಳಬೇಡಿ. ಹಾಗೂ ಅವನಿಗೆ ತಾಮ್ರದ ಪಾತ್ರೆಯಿಂದ ನೀರನ್ನು ಕೂಡ ನೀಡಬೆಡಿ. ಶನಿ ಪೂಜೆಯಲ್ಲಿ ಯಾವಾಗಲು ಕಬ್ಬಿಣದ ಪಾತ್ರೆಯನ್ನು ಉಪಯೋಗಿಸಬೇಕು. ತಾಮ್ರದ ಪಾತ್ರೆಯನ್ನು ಶನಿ ದೇವನ ತಂದೆಯಾದ ಸೂರ್ಯದೇವನ ಪೂಜೆಯಲ್ಲಿ ಬಳಸಲಾಗುತ್ತದೆ. ಶನಿದೇವನು ಕಬ್ಬಿಣದ ವಸ್ತುಗಳನ್ನು ಇಷ್ಟಪಡುವುದರಿಂದ ಅವನ ಪೂಜೆಯಲ್ಲಿ ತಪ್ಪದೇ ಕಬ್ಬಿಣದ ಪಾತ್ರೆಗಳನ್ನು ಬಳಸಿ. ಕಬ್ಬಿಣದ ದೀಪಗಳನ್ನು ಮಾತ್ರ ಪೂಜೆಯಲ್ಲಿ ಬಳಸಬೇಕು. ಮಹಿಳೆಯರು ಶನಿದೇವನಿಗೆ ದೀಪವನ್ನು ಬೆಳಗಬಹುದು ಆದರೆ ಅವುಗಳನ್ನು ಮುಟ್ಟುವಂತಿಲ್ಲ.

ಭಗವಾನ್‌ ಶನಿದೇವನ ಮುಂದೆ ದೀಪವನ್ನು ಬೆಳಗುವುದು ಅತ್ಯಂತ ಶುಭವಾಗಿದೆ. ಒಂದು ವೇಳೆ ನೀವು ಶನಿದೇವನ ಮುಂದೆ ದೀಪವನ್ನು ಬೆಳಗುವುದಾದರೆ, ದೀಪವನ್ನು ಬೆಳಗುವ ಮುನ್ನ ನೀವು ಸ್ವಚ್ಛವಾಗಿರಬೇಕು. ಪೂಜೆಗೂ ಮುನ್ನ ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಬೇಕು. ಶುಚಿತ್ವವು ಭಗವಾನ್‌ ಶನಿದೇವನಿಗೆ ಅತ್ಯಂತ ಪ್ರಿಯವಾಗಿದೆ. ಮತ್ತು ಇದರೊಂದಿಗೆ ಶನಿದೇವನು ಕಪ್ಪು ಮತ್ತು ನೀಲಿ ಬಣ್ಣವನ್ನು ಪ್ರೀತಿಸುತ್ತಾರೆ. ಆದ್ದರಿಂದ ಪೂಜೆಯಲ್ಲಿ ಅವರ ಪ್ರೀತಿಯ ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದು ಪೂಜೆಯ ಫಲವನ್ನು ನೀಡುತ್ತದೆ.

Kishor KV