ಜಗತ್ತಿನಾದ್ಯಂತ ವರ್ಷಕ್ಕೆ 100 ಕೋಟಿ ಟನ್ ಆಹಾರ ವ್ಯರ್ಥ!

ಜಗತ್ತಿನಾದ್ಯಂತ ವರ್ಷಕ್ಕೆ 100 ಕೋಟಿ ಟನ್ ಆಹಾರ ವ್ಯರ್ಥ!

ನವದೆಹಲಿ: ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 100 ಕೋಟಿ ಮೆಟ್ರಿಕ್ ಟನ್ ಆಹಾರ ಪದಾರ್ಥ ವ್ಯರ್ಥವಾಗುತ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಜಾಗತಿಕವಾಗಿ ಉತ್ಪಾದನೆಯಾಗುತ್ತಿರುವ ಅಂದಾಜು 3/1ರಷ್ಟು ಆಹಾರವನ್ನು ಹಾಳು ಮಾಡುತ್ತಿದ್ದೇವೆ. ಜಗತ್ತಿನಲ್ಲಿ ಪ್ರತಿವರ್ಷ ಭಾರೀ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ಆಹಾರದ ಪ್ರಮಾಣ ಎಷ್ಟು ಎಂಬ ಬಗ್ಗೆ ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ 2021ರ ವರದಿಯನ್ನು ಯುಎನ್ ಇಪಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಬಿಎಂಟಿಸಿ ವಜ್ರ ಬಸ್‌ ದರ ಶೇ. 20ರಷ್ಟು ಹೆಚ್ಚಳ – ಜ. 1ರಿಂದ ಅನ್ವಯ

ಜಗತ್ತಿನ ಪ್ರತಿಯೊಬ್ಬರಿಗೂ ಉಣಬಡಿಸುವಷ್ಟು ಆಹಾರ ಉತ್ಪಾದನೆಯಾಗುತ್ತದೆ. ಆದರೆ ವ್ಯರ್ಥವಾಗುವಿಕೆ ಹಾಗೂ ದುರ್ಬಲ ನಿರ್ವಹಣೆಯಿಂದಾಗಿ ಅಂತರ ಉಂಟಾಗುತ್ತಿದೆ. ಹೀಗಾಗಿ ಜಾಗತಿಕ ಹಸಿವು ಮತ್ತು ಜಾಗತಿಕ ಆಹಾರ ವ್ಯರ್ಥಗೊಳ್ಳುವಿಕೆ ಸಮರ್ಥವಾಗಿ ನಿರ್ವಹಿಸಬೇಕಾದ 2 ಪ್ರಮುಖ ವಿಚಾರಗಳಾಗಿವೆ ಎಂದು ವರದಿ ತಿಳಿಸಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಈ ಪುರಾವೆಯನ್ನು ನಾವು ಇನ್ಮುಂದೆ ನಿರ್ಲಕ್ಷಿಸುವುದು ಬಹಳ ಕಷ್ಟಕರವಾಗಲಿದೆ. ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವ ವೈವಿಧ್ಯದ ನಷ್ಟ, ಮಾಲಿನ್ಯ ಮತ್ತು ತ್ಯಾಜ್ಯ ಬಿಕ್ಕಟ್ಟನ್ನು ನಿಭಾಯಿಸಲು ಆಹಾರ ವ್ಯವಸ್ಥೆಗಳ ಸುಧಾರಣೆ ನಿರ್ಣಾಯಕವಾಗಿದೆ ಎಂದು ವರದಿ ಎಚ್ಚರಿಸಿದೆ.

ಭಾರೀ ಪ್ರಮಾಣದ ಆಹಾರವನ್ನು ವ್ಯರ್ಥ ಮಾಡುತ್ತಿರುವುದು ಮಾನವ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯ ಮೂರನೇ ಒಂದು ಭಾಗದಷ್ಟಿರುತ್ತದೆ. ಅಷ್ಟೇ ಅಲ್ಲ ಶೇ.86ರಷ್ಟು ಸಸ್ಯ ಮತ್ತು ಪ್ರಾಣಿ ಜಾತಿಗಳು ಅಳಿವಿನ ಅಂಚಿನಲ್ಲಿದ್ದು, ಕೃಷಿಯು ಅಪಾಯದಲ್ಲಿದೆ. ಆಹಾರ ವ್ಯರ್ಥ ಮಾಡುವುದು ಜಾಗತಿಕವಾಗಿ ಭಾರೀ ಪ್ರಮಾಣದ ಆಹಾರ ಕೊರತೆಗೆ ಎಡೆಮಾಡಿಕೊಡಲಿದೆ ಎಂದು ವರದಿ ತಿಳಿಸಿದೆ.

ಫುಡ್ ವೇಸ್ಟ್ ಇಂಡೆಕ್ಸ್ ವರದಿ ಪ್ರಕಾರ, ಪ್ರತಿ ಮನೆಯಲ್ಲಿನ ಆಹಾರ ವ್ಯರ್ಥವಾಗುತ್ತಿರುವುದು ಬೃಹತ್ ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದೆ. ಆಹಾರ ವ್ಯರ್ಥ ಮಾಡುವುದರಲ್ಲಿ ಎಲ್ಲರ ಪಾಲು ಸೇರಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಪ್ರತಿದಿನದ ಜೀವನಶೈಲಿಯಲ್ಲಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ವರದಿ ಸಲಹೆ ನೀಡಿದೆ.

suddiyaana