73 ವರ್ಷದಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಸಖತ್ ಸ್ಟಂಟ್ – ‘ವೆಟ್ಟೈಯನ್’ ಸಿನಿಮಾದಲ್ಲಿ ಸಾಹಸ ದೃಶ್ಯ ಕಂಡು ಅಭಿಮಾನಿಗಳು ಪುಳಕ
73 ವರ್ಷವಾದರೂ ಚಿರಯುವಕನ ಲುಕ್.. ದಣಿವರಿಯದ ಉತ್ಸಾಹ.. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಅವರೇ ಸಾಟಿ. ಇದೀಗ ರಜನಿ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ‘ವೆಟ್ಟೈಯನ್’ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಸಾಕಷ್ಟಿವೆ. ರಜನಿಕಾಂತ್ ಅವರ ಅಭಿಮಾನಿಗಳಿಗೆ ಈ ಸಿನಿಮಾದ ಟೀಸರ್ ಸಖತ್ ಇಷ್ಟವಾಗಿದೆ.
ಇದನ್ನೂ ಓದಿ: ರಜನಿಕಾಂತ್ 170 ನೇ ಸಿನಿಮಾದ ಟೈಟಲ್ ‘ವೆಟ್ಟೈಯನ್’! – ತಲೈವಾ ಎಂಟ್ರಿಗೆ ಫ್ಯಾನ್ಸ್ ಥ್ರಿಲ್!
ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 170ನೇ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ. ರಜನಿಕಾಂತ್ ಅವರ ಜನ್ಮದಿನದ ಪ್ರಯುಕ್ತ 170ನೇ ಸಿನಿಮಾದ ಟೈಟಲ್ ಅಭಿಮಾನಿಗಳಿಗೆ ಗಿಫ್ಟ್ ರೀತಿಯಲ್ಲಿ ಚಿತ್ರತಂಡ ನೀಡಿದೆ. ‘ವೆಟ್ಟೈಯನ್’ ಎಂಬ ಶೀರ್ಷಿಕೆ ಘೋಷಣೆಯಾಗಿದೆ. ಶೀರ್ಷಿಕೆ ಅನಾವರಣ ಮಾಡಲು ಬಿಡುಗಡೆ ಮಾಡಿರುವ ಟೀಸರ್ ಗಮನ ಸೆಳೆಯುತ್ತಿದೆ. ‘ವೆಟ್ಟೈಯನ್’ ಸಿನಿಮಾಗೆ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡುತ್ತಿದೆ. ‘ವೆಟ್ಟೈಯನ್’ ಸಿನಿಮಾದಲ್ಲೂ ಸಾಹಸ ದೃಶ್ಯಗಳು ಇರಲಿವೆ ಎಂಬುದಕ್ಕೆ ಟೈಟಲ್ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ಅಭಿಮಾನಿಗಳಿಗೆ ಈ ಟೀಸರ್ ಇಷ್ಟವಾಗಿದೆ. ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ‘ವೆಟ್ಟೈಯನ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಈ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಯಿತು. ಅವರ ಜೊತೆ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದೆ ಬಂದಿದ್ದಾರೆ. ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ, ‘ಲಾಲ್ ಸಲಾಂ’ ಸಿನಿಮಾದಲ್ಲೂ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಕಿ. ತಲೈವ ಜನ್ಮದಿನದ ಪ್ರಯುಕ್ತ ‘ಲಾಲ್ ಸಲಾಂ’ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಇದರಲ್ಲೂ ಆ್ಯಕ್ಷನ್ ದೃಶ್ಯ ಮತ್ತು ಹಿನ್ನಲೆ ಸಂಗೀತ ಗಮನ ಸೆಳೆದಿದೆ. ಈ ಸಿನಿಮಾ ಕೂಡ ‘ಲೈಕಾ ಪ್ರೊಡಕ್ಷನ್ಸ್’ ಮೂಲಕ ಮೂಡಿಬರುತ್ತಿದೆ.