ಈಶ್ವರಪ್ಪ ಗುಂಡಿಕ್ಕಿ ಕೊಲ್ಲುವ ಕಾನೂನು ಹೇಳಿಕೆ – ಕಾಂಗ್ರೆಸ್‌ ನಾಯಕರಿಂದ ತೀವ್ರ ಆಕ್ರೋಶ

ಈಶ್ವರಪ್ಪ ಗುಂಡಿಕ್ಕಿ ಕೊಲ್ಲುವ ಕಾನೂನು ಹೇಳಿಕೆ – ಕಾಂಗ್ರೆಸ್‌ ನಾಯಕರಿಂದ ತೀವ್ರ ಆಕ್ರೋಶ

ಕಾಂಟ್ರವರ್ಸಿ ಅಂದ್ರೆ ಈಶ್ವರಪ್ಪ.. ಈಶ್ವರಪ್ಪ ಅಂದ್ರೆ ಕಾಂಟ್ರವರ್ಸಿ.. ಸದಾ ಒಂದಿಲ್ಲೊಂದು ವಿವಾದಗಳಿಂದ ಸದ್ದು ಮಾಡುವ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.  ದೇಶ ವಿಭಜನೆ ಮಾಡುವ ಹಾಗೂ ದೇಶವನ್ನು ಛಿದ್ರಗೊಳಿಸುವ ಮನಸ್ಥಿತಿ ಹೊಂದಿರುವವರನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನು ತರಬೇಕು ಎನ್ನುವ ಮೂಲಕ ಹೊಸ ಕಿಡಿ ಹೊತ್ತಿಸಿದ್ದಾರೆ. ಈಶ್ವರಪ್ಪರ ಈ ಮಾತು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಕಾಂಗ್ರೆಸ್ ಮುಖಂಡ ಹನುಮಂತ ಎಂಬುವರು ಪ್ರಚೋದನಾಕಾರಿ ಹೇಳಿಕೆ ಆರೋಪದಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್​ಐಆರ್ ದಾಖಲು ಮಾಡಿರುವ ಪೊಲೀಸರು ಫೆಬ್ರವರಿ 15ರಂದು ಬೆಳಗ್ಗೆ 10:30 ಕ್ಕೆ ಠಾಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದಾರೆ. ಆದ್ರೆ ನೋಟಿಸ್​​ಗೆ ಕ್ಯಾರೇ ಎನ್ನದ ಈಶ್ವರಪ್ಪ, ಇಂತಹ ನೂರು ನೋಟಿಸ್ ಗಳು ಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಟೀಮ್ 400 ಕ್ರಾಸ್ ಮಾಡುತ್ತಾ? – ಕರ್ನಾಟಕದ ಸಮೀಕ್ಷೆ ಹೇಗಿದೆ?, ಕಮಾಲ್ ಮಾಡುತ್ತಾ ಬಿಜೆಪಿ-ಜೆಡಿಎಸ್ ಕಮಾಲ್?

ಕಳೆದ ಕೆಲ ದಿನಗಳಿಂದ ತೆರಿಗೆ ತಾರತಮ್ಯ ವಿಚಾರ ಭಾರೀ ಚರ್ಚೆಯಾಗ್ತಿದೆ. ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಮೋಸ ಮಾಡ್ತಿದೆ. ಹೀಗೇ ಆದ್ರೆ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಿ ಬರುತ್ತೆ ಅಷ್ಟೇ ಅಂತಾ ಸಂಸದ ಡಿ.ಕೆ ಸುರೇಶ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ದೇಶದ ವಿಭಜನೆ ಮಾಡುವ ಹಾಗೂ ಭಾರತವನ್ನು ಛಿದ್ರಗೊಳಿಸುವ ಮನಸ್ಥಿತಿ ಹೊಂದಿರುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಬೇಕು ಎಂದಿದ್ದರು. ದಾವಣಗೆರೆಯಲ್ಲಿ ಮಾತನಾಡಿದ್ದ ಈಶ್ವರಪ್ಪ, ಕಾಂಗ್ರೆಸ್‌ ಮುಖಂಡರಾದ ಡಿ.ಕೆ. ಸುರೇಶ್‌ ಹಾಗೂ ವಿನಯ್‌ ಕುಲಕರ್ಣಿ, ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಘೋಷಿಸಬೇಕು ಎನ್ನುತ್ತಿದ್ದಾರೆ. ಆದರೆ ದೇಶದ್ರೋಹಿಗಳ ಈ ಕನಸು ನನಸಾಗಲು ಬಿಜೆಪಿ ಎಂದೂ ಅವಕಾಶ ನೀಡುವುದಿಲ್ಲ. ಒಂದ್ಕಡೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಒಂದೇ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ದೇಶವನ್ನು ಒಗ್ಗೂಡಿಸುತ್ತೇನೆ ಎಂದು ರಾಹುಲ್‌ ಗಾಂಧಿ ಭಾರತ್‌ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ಇಬ್ಬರು ದೇಶದ್ರೋಹಿಗಳು ದಕ್ಷಿಣ ಭಾರತ ಪ್ರತ್ಯೇಕ ರಾಷ್ಟವಾಗಬೇಕು ಎಂದು ಕೇಳುತ್ತಿದ್ದಾರೆ. ಇದು ಕಾಂಗ್ರೆಸ್‌ನ ಧ್ವಂಧ್ವ ನಿಲುವಿಗೆ ಸಾಕ್ಷಿ ಎಂದು ಕಿಡಿಕಾರಿದ್ದರು.

ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಬೆಂಗಳೂರಿನ ಚಕ್ರವರ್ತಿ ಬಡಾವಣೆಯಲ್ಲಿರುವ ಕೆ.ಎಸ್​.ಈಶ್ವರಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.  ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದಿದ್ದಾರೆ.  ಈಶ್ವರಪ್ಪ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಶ್ವರಪ್ಪ ಸ್ಟೇಟ್​ಮೆಂಟ್ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಎಫ್​ಐಆರ್ ದಾಖಲಾಗಿದೆ. ಮುಂದಿನ ಕ್ರಮ ಕೈಗೊಳ್ತೇವೆ ಎಂದಿದ್ದಾರೆ. ಇನ್ನು ಸಂಸದ ಡಿ.ಕೆ ಸುರೇಶ್ ಅಂತೂ ಬೇರೆಯವರು ಏಕೆ ಗುಂಡಿಕ್ಕಿ ಕೊಲ್ಲಬೇಕು, ನಿಮ್ಮ ಎದುರು ಬಂದು ನಿಲ್ಲುತ್ತೇನೆ, ನೀವೇ ಗುಂಡಿಕ್ಕಿ ಕೊಂದುಬಿಡಿ..  ನಿಮ್ಮ ಆಸೆ ಈಡೇರಿಸಿಕೊಂಡು ನಿಮ್ಮ ನಾಯಕರಿಂದ ಶಹಬ್ಬಾಸ್ ಗಿರಿ ತೆಗೆದುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ.ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಸೋದರನ ಪರ ಬ್ಯಾಟ್ ಬೀಸಿದ್ದಾರೆ. ಇನ್ನು ಸಚಿವರಾದ ಪ್ರಿಯಾಂಕ್ ಖರ್ಗೆ, ಹೆಚ್.ಕೆ ಪಾಟೀಲ್, ಹೆಚ್.ಸಿ ಬಾಲಕೃಷ್ಣ  ಕೂಡ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಬಿಜೆಪಿ ನಾಯಕರು ಮಾತ್ರ ಈಶ್ವರಪ್ಪ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ. ಅವ್ರ ಹೇಳಿಕೆಗೆ ಅಪಾರ್ಥ ಕಲ್ಪಿಸೋದು ಬೇಡ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಒಟ್ನಲ್ಲಿ ರಾಜ್ಯದಲ್ಲಿ ಗುಂಡೇಟಿನ ಗುದ್ದಾಟ ತಾರಕಕ್ಕೇರಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿವೆ.  ಈ ಜಟಾಪಟಿ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.

Shwetha M