ಸೇವಾ ಸಿಂಧು ಪೋರ್ಟಲ್‌ನಲ್ಲಿ ದೋಷ –  ಗೃಹಜ್ಯೋತಿ ಯೋಜನೆಯಡಿ ನೋಂದಣಿಗೆ ಯಾವುದೇ ಗಡುವು ಇಲ್ಲ!

ಸೇವಾ ಸಿಂಧು ಪೋರ್ಟಲ್‌ನಲ್ಲಿ ದೋಷ –  ಗೃಹಜ್ಯೋತಿ ಯೋಜನೆಯಡಿ ನೋಂದಣಿಗೆ ಯಾವುದೇ ಗಡುವು ಇಲ್ಲ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಆರಂಭದಿಂದಲೂ ವಿಘ್ನ ಎದುರಾಗುತ್ತಿದೆ. ಅರ್ಜಿ ಸಲ್ಲಿಕೆ ಆರಂಭವಾದ ದಿನದಿಂದಲೇ ವೆಬ್‌ಸೈಟ್‌ನಲ್ಲಿ ಒಂದಿಲ್ಲೊಂದು ಸಮಸ್ತೆ ಎದುರಾಗುತ್ತಿದೆ. ಸರ್ವರ್‌ ಸಮಸ್ಯೆಗಳಿಂದಾಗಿ ಬೇಡಿಕೆಯನ್ನು ಪೂರೈಸಲು ವಿಫಲವಾದ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅರ್ಹ ಗ್ರಾಹಕರಿಗೆ ತಿಂಗಳಿಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಲು ನೀಡಲಾಗಿದ್ದ ಗಡುವನ್ನು ಹಿಂತೆಗೆದುಕೊಂಡಿದೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ 3 ನೇ ದಿನವೂ ವಿಘ್ನ! – ಸರ್ವರ್‌ ಸಮಸ್ಯೆಗೆ ತಲೆಕೆಡಿಸಿಕೊಂಡ ಅಧಿಕಾರಿಗಳು

ಭಾನುವಾರದಿಂದ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಲೇ ಇದೆ. ಅರ್ಜಿ ಸ್ವೀಕರಿಸುತ್ತಿಲ್ಲ, ರಿಜೆಕ್ಟ್‌ ಆಗುತ್ತಿದೆ, ಸರ್ವರ್‌ ಡೌನ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಲು ನೀಡಲಾಗಿದ್ದ ಗಡುವನ್ನು ಹಿಂತೆಗೆದುಕೊಂಡಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ 1.60 ಲಕ್ಷಕ್ಕೂ ಹೆಚ್ಚು ಗ್ರಾಹಕರು ಯೋಜನೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಎರಡು ದಿನಗಳಲ್ಲಿ 1,61,958 ಗ್ರಾಹಕರು ನೋಂದಾಯಿಸಿದ್ದರೆ, ಸೋಮವಾರವೊಂದರಲ್ಲೇ 1,06,958 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಮತ್ತು ಇ-ಆಡಳಿತ ಇಲಾಖೆಗಳ ಅಧಿಕೃತ ಪ್ರಕಟಣೆ ತಿಳಿಸಿದೆ. ಸೋಮವಾರ ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ ತಿಂಗಳ ವಿದ್ಯುತ್ ಬಿಲ್‌ಗಳು ಋಣಾತ್ಮಕ ಮೊತ್ತವನ್ನು ತೋರಿಸುತ್ತಿವೆ ಎಂಬ ನಾಗರಿಕರ ದೂರು ಕೇಳಿಬಂದಿದ್ದು, ಬೆಸ್ಕಾಂ ತನ್ನ ವ್ಯವಸ್ಥೆಯಲ್ಲಿ ಬಿಲ್ ಅನ್ನು ಇನ್ನೂ ನವೀಕರಿಸದಿರುವುದು ಇದಕ್ಕೆ ಕಾರಣ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಮೊತ್ತವು ಪ್ರತಿಫಲಿಸದ ಸಂದರ್ಭಗಳಲ್ಲಿ, ಬಿಲ್‌ಗಳ ಭೌತಿಕ ಪ್ರತಿಯಲ್ಲಿ ದಾಖಲಾದ ಮೊತ್ತವನ್ನು ನಮೂದಿಸಲು ಮತ್ತು ಆನ್‌ಲೈನ್‌ನಲ್ಲಿ ತಮ್ಮ ಪಾವತಿಗಳನ್ನು ಮಾಡಲು ಗ್ರಾಹಕರನ್ನು ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರು ತಮ್ಮ ಭೌತಿಕ ಬಿಲ್‌ಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ತಮ್ಮ ಹತ್ತಿರದ ಉಪವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಸಹಾಯವಾಣಿ 1912 ಗೆ ಕರೆ ಮಾಡಬಹುದು. ಪರಿಷ್ಕೃತ ದರದ ಪ್ರಕಾರ, ಗ್ರಾಹಕರಿಗೆ ಅವರ ಬಳಕೆಗೆ ಅನುಗುಣವಾಗಿ ಬಿಲ್ ಮಾಡಲಾಗುತ್ತದೆ ಮತ್ತು ಹೆಚ್ಚುವರಿ ಬಿಲ್ಲಿಂಗ್ ಇಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಜುಲೈನಿಂದ ಯಾವುದೇ ತೊಂದರೆಗಳಿಲ್ಲದೆ ಬಿಲ್ಲಿಂಗ್ ವ್ಯವಸ್ಥೆಯು ಸುಗಮವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

suddiyaana