ಮ್ಯಾಕ್ಸ್ ಅಪ್‌ಡೇಟ್ ಬಗ್ಗೆ ಫ್ಯಾನ್ಸ್ ವ್ಯಂಗ್ಯ – ಇನ್ನೊಬ್ಬರ ಮೇಲಿನ ಪೈಪೋಟಿಗೆ ಅಪ್‌ಡೇಟ್ ಕೊಡೋಕ್ಕಾಗಲ್ಲ ಎಂದ ಕಿಚ್ಚ!

ನಟರ ಸಿನಿಮಾಗಳು ಘೋಷಣೆಯಾದ ಬಳಿಕ ಆ ಸಿನಿಮಾಗಳ ಬಗ್ಗೆ ಅವರ ಫ್ಯಾನ್ಸ್‌ಗೆ ತುಂಬಾನೆ ಕತೂಹಲವಿರುತ್ತೆ. ತಮ್ಮ ನೆಚ್ಚಿನ ನಟನ ಸಿನಿಮಾ ಎಲ್ಲಿಯವರೆಗೆ ಬಂದಿದೆ..? ಯಾವಾಗ ಬಿಡುಗಡೆ..? ಯಾರ್ಯಾರು ಅದರಲ್ಲಿ ಇದ್ದಾರೆ ಹೀಗೆ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಾರೆ. ಆದರೆ, ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ನಟರು ಹುಚ್ಚುತನ ಮೆರೆಯುವವರಿಗೆ ಬುದ್ದಿವಾದ ಹೇಳಬೇಕಾಗುತ್ತಿದೆ. ಇದೀಗ ನಟ ಕಿಚ್ಚ ಸುದೀಪ್ ತನ್ನ ಕೆಲ ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ನಟ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದ ಕೆಲಸ ಭರದಿಂದ ಸಾಗುತ್ತಿದೆ. ಈ ಚಿತ್ರದಿಂದ ಅಪ್‌ಡೇಟ್ ಬರುವುದು ತಡವಾಗುತ್ತಿದೆ ಎಂಬ ಕಾರಣಕ್ಕೆ ಕೆಲವರು ವ್ಯಂಗ್ಯ ಮಾಡುತ್ತಿದ್ದಾರೆ. ಅಂಥವರಿಗೆ ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಡೇಟ್ಸ್ ಬಗ್ಗೆ ಅನೇಕರು ಟ್ವೀಟ್ಗಳನ್ನು ಮಾಡುತ್ತಿರುವುದು ನೋಡಲು ಕ್ರೇಜಿ ಎನಿಸುತ್ತದೆ. ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲು ಅಥವಾ ಬೇರೆ ನಟರ ಜೊತೆ ಪೈಪೋಟಿ ಮಾಡಲು ಅಪ್ಡೇಟ್ಸ್ ನೀಡುವುದಿಲ್ಲ. ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್ ಮಾಡಬೇಕು ಎಂದಾಗ ಅಪ್ಡೇಟ್ಸ್ ನೀಡಲಾಗುವುದು ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.
‘ನನ್ನ ಕೆಲಸದ ಬಗ್ಗೆ ನೀವೆಲ್ಲರೂ ತೋರಿಸಿದ ಆಸಕ್ತಿಯನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೇನೆ. ಆದರೆ ಬಿಗ್ ಬಾಸ್ ಬಗ್ಗೆ ಮತ್ತು ಸಿಸಿಎಲ್ ಬಗ್ಗೆ ನೀವು ವ್ಯಂಗ್ಯ ಮಾಡಿದರೆ ಅದರಿಂದ ಒಂದು ಸಿನಿಮಾಗೆ ಸರಿಯಾದ ರೀತಿಯಲ್ಲಿ ಇಂಟರೆಸ್ಟ್ ತೋರಿಸಿದಂತೆ ಆಗುವುದಿಲ್ಲ. ಮ್ಯಾಕ್ಸ್ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮನ್ನು ಮನರಂಜಿಸಲು ಅದೇ ನಮ್ಮ ಮೊದಲು ಆದ್ಯತೆ. ಅದಕ್ಕಾಗಿ ಸಾಧ್ಯವಿರುವ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ’ ಎಂದು ಸುದೀಪ್ ಅವರು ಬರೆದುಕೊಂಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾಗೆ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿದೆ. ತಮಿಳಿನ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಾಲಿವುಡ್ ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ಈ ಸಿನಿಮಾವನ್ನು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ಬಿಡುಗಡೆಯಾದ ಫಸ್ಲ್ ಗ್ಲಿಂಪ್ಸ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಈ ಸಿನಿಮಾದಲ್ಲಿ ಸುದೀಪ್ ಅವರು ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.