ನಿರ್ಣಾಯಕ ಪಂದ್ಯದಲ್ಲಿ ಸೋತು ಸುಣ್ಣವಾದ ಕಿವೀಸ್ ಪಡೆ – ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಇಂಗ್ಲೆಂಡ್ ಎಂಟ್ರಿ

ನಿರ್ಣಾಯಕ ಪಂದ್ಯದಲ್ಲಿ ಸೋತು ಸುಣ್ಣವಾದ ಕಿವೀಸ್ ಪಡೆ – ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಇಂಗ್ಲೆಂಡ್ ಎಂಟ್ರಿ

ನ್ಯೂಜಿಲೆಂಡ್ ಪಡೆ ನಿರ್ಣಾಯಕ ಪಂದ್ಯದಲ್ಲಿಯೇ ಗಂಟು ಮೂಟೆ ಕಟ್ಟಿದೆ. ಜೊತೆಗೆ ಇಂಗ್ಲೆಂಡ್ ರೋಚಕ ಜಯ ಸಾಧಿಸಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ.

ಇದನ್ನೂ ಓದಿ:ಪಬ್ಲಿಕ್ ಪ್ಲೇಸ್‌ನಲ್ಲಿ ಪಾಂಡ್ಯ ರೊಮ್ಯಾನ್ಸ್ – ಕಿಸ್ ಕೊಟ್ಟು ಕೊಟ್ಟು.. ಹಾರ್ದಿಕ್ ಟ್ರೋಲ್

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆದಿದೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಿವೀಸ್ ಪಡೆ ಮೊದಲ ವಿಕೆಟ್‌ಗೆ 64 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಆದಿಲ್ ರಶೀದ್ ಬೇರ್ಪಡಿಸಿದರು. 25 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳ ಸಹಿತ 36 ರನ್ ಗಳಿಸಿ ಔಟ್ ಮಾಡಿದರು. ಮತ್ತೊಬ್ಬ ಆರಂಭಿಕ ಫಿನ್ ಅಲೆನ್ 19 ಎಸೆತಗಳಲ್ಲಿ 29 ರನ್ ಗಳಿಸಿ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಬೆಥೆಲ್‌ಗೆ ಕ್ಯಾಚ್ ನೀಡಿದರು. ಈ ವಿಕೆಟ್ ನಂತರ ಕಿವೀಸ್ ಬ್ಯಾಟಿಂಗ್ ಕುಸಿತ ಕಂಡಿತು. ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದ ಕಿವೀಸ್ ಪಡೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ. ಇಂಗ್ಲೆಂಡ್ ತಂಡದ ಪರ ಸ್ಪಿನ್ನರ್‌ಗಳು ಅದ್ಭುತ ಬೌಲಿಂಗ್ ಮಾಡಿದರು. ನ್ಯೂಜಿಲ್ಯಾಂಡ್ ಕಳೆದುಕೊಂಡ ಎಲ್ಲಾ 7 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಪಡೆದುಕೊಂಡಿದ್ದು ವಿಶೇಷ.

160 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 2 ರನ್​ಗಳಾಗುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಆರಂಭಿಕರಾದ ಫಿಲ್ ಸಾಲ್ಟ್ 2 ರನ್​ಗಳಿಸಿ ಮ್ಯಾಟ್​ ಹೆನ್ರಿಗೆ ವಿಕೆಟ್ ಒಪ್ಪಿಸಿದರೆ, 2ನೇ ಓವರ್​​ನಲ್ಲಿ ಜೋಸ್ ಬಟ್ಲರ್ ಖಾತೆ ತೆರೆಯದೇ ಲಾಕಿ ಫರ್ಗ್ಯುಸನ್​ಗೆ ವಿಕೆಟ್ ನೀಡಿದರು. ಇಬ್ಬರು ವಿಕೆಟ್ ಕೀಪರ್ ಸೀಫರ್ಟ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ನಂತರ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಾಯಕ ಬ್ರೂಕ್ ಹಾಗೂ ಜಾಕೋಬ್ ಬೆಥೆಲ್ 45 ರನ್​ ಸೇರಿಸಿ ಚೇತರಿಕೆ ನೀಡಿದ್ದರು. ಆದರೆ ಪವರ್​ ಪ್ಲೇ ಮುಗಿಯುತ್ತಿದ್ದಂತೆ ಇಬ್ಬರು ಕೇವಲ 8 ರನ್​ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದ್ದ ಬ್ರೂಕ್ 8ನೇ ಓವರ್​​ನಲ್ಲಿ ಗ್ಲೆನ್ ಫಿಲಿಪ್ಸ್​ ಬೌಲಿಂಗ್​​ನಲ್ಲಿ ಡ್ಯಾರಿಲ್ ಮಿಚೆಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರದ ಓವರ್​​ನಲ್ಲೇ 16 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 21 ರನ್​ಗಳಿಸಿದ್ದ ಬೆಥೆಲ್  ರಚಿನ್ ರವೀಂದ್ರ ಬೌಲಿಂಗ್​​ನಲ್ಲಿ ಫಿಲಿಪ್ಸ್ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾದರು. ಈ ಹಂತದಲ್ಲಿ ಗೆಲುವು ಕಿವೀಸ್ ಪಡೆಯತ್ತ ವಾಲಿತ್ತು. ಆಗ ಸಿಕ್ಕಿದ್ದು ರೋಚಕ ತಿರುವು. ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಗೇಮ್ ಚೇಂಜ್ ಮಾಡಿದರು. ಟಾಮ್ ಬಾಂಟನ್ ಹಾಗೂ ಸ್ಯಾಮ್​ ಕರ್ರನ್ 5ನೇ ವಿಕೆಟ್​​ಗೆ 42 ರನ್​ ಸೇರಿಸಿ ಚೇತರಿಕೆ ನೀಡಿದರು. ಬಾಂಟನ್ 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 33 ರನ್​ಗಳಿಸಿದರೆ, ಕರನ್​ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24 ರನ್​ಗಳಿಸಿ ಔಟ್ ಆದರು.

ಕೊನೆಯ 18 ಎಸೆತಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 43 ರನ್​ಗಳ ಅವಶ್ಯಕತೆ ಇತ್ತು.  ಗ್ಲೆನ್ ಫಿಲಿಪ್ಸ್ ಎಸೆದ 18ನೇ ಓವರ್​​ನಲ್ಲಿ ವಿಲ್​ ಜಾಕ್ಸ್ ಹಾಗೂ ರೆಹಾನ್ ಅಹ್ಮದ್ 21 ರನ್​ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ನಂತರ 19ನೇ ಓವರ್​​ನಲ್ಲಿ ಮಿಚೆಲ್​ ಸ್ಯಾಂಟ್ನರ್​ಗೂ ಕೂಡ ಈ ಜೋಡಿ 16 ರನ್​ ಚಚ್ಚಿದರು. ಹಾಗಾಗಿ ಕೊನೆಯ ಓವರ್​​ನಲ್ಲಿ ಗೆಲ್ಲಲು ಕೇವಲ 5 ರನ್​ಗಳ ಅವಶ್ಯಕತೆ ಇತ್ತು.  ಕೇವಲ ಮೂರು ಎಸೆತಗಳಲ್ಲೇ ಜಯ ಇಂಗ್ಲೆಂಡ್ ಪಾಲಿಗಾಯ್ತು. ಇಂಗ್ಲೆಂಡ್ ತಂಡ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

Sulekha

Leave a Reply

Your email address will not be published. Required fields are marked *