ಆಂಗ್ಲರ ಬೆಂಡೆತ್ತಿದ ಭಾರತ – ಇಂಗ್ಲೆಂಡ್ ಆಲೌಟ್, ಟೀಮ್ ಇಂಡಿಯಾಕ್ಕೆ ಬೃಹತ್ ಅಂತರದ ಮುನ್ನಡೆ

ಆಂಗ್ಲರ ಬೆಂಡೆತ್ತಿದ ಭಾರತ – ಇಂಗ್ಲೆಂಡ್ ಆಲೌಟ್, ಟೀಮ್ ಇಂಡಿಯಾಕ್ಕೆ ಬೃಹತ್ ಅಂತರದ ಮುನ್ನಡೆ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಂಗ್ಲರನ್ನು ಬಗ್ಗು ಬಡಿದ ಟೀಮ್ ಇಂಡಿಯಾ ಬೌಲರ್‌ಗಳು 319 ರನ್‌ಗಳಿಗೆ ಆಲೌಟ್ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 319 ರನ್‌ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ 445 ರನ್ ಗಳಿಸಿತ್ತು. ಇದೀಗ ಆಂಗ್ಲರನ್ನ ಬೆಂಡೆತ್ತಿದ್ದ ಭಾರತದ ಬೌಲರ್‌ಗಳು ಬೃಹತ್ ಮುನ್ನಡೆ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದಾರೆ.

ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬೇಗನೆ ಔಟಾದರೆ, ಆ ಬಳಿಕ ಬಂದ ಶುಭ್ಮನ್ ಗಿಲ್  ಸೊನ್ನೆ ಸುತ್ತಿದರು. ನಂತರ ಬಂದ ರಜತ್ ಪಾಟಿದಾರ್ ಕೂಡಾ ಹಾಗೆ ಬಂದು ಹೀಗೆ ಹೋದರು. ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು. ಹಿಟ್‌ಮ್ಯಾನ್ ಶತಕ ಭಾರತಕ್ಕೆ ಆಸರೆಯಾಯ್ತು. ಇವರ ಜೊತೆಗೆ ಮೊದಲ ಪಂದ್ಯದಲ್ಲೇ ಸರ್ಫರಾಝ್ ಖಾನ್ ಬಿರುಸಿನ ಅರ್ಧಶತಕ ಸಿಡಿಸಿ ರನೌಟ್ ಆದರು. ಹಾಗೆಯೇ ರವೀಂದ್ರ ಜಡೇಜಾ 112 ರನ್‌ಗಳು ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 445 ರನ್ಗಳನ್ನು ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಸ್ಪೋಟಕ ಆರಂಭ ಒದಗಿಸಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಕೆಟ್ ಕೇವಲ 88 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಆದರೆ ಮತ್ತೊಂದೆಡೆ ಝಾಕ್ ಕ್ರಾಲಿ (15) ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಸಾಧನೆ ಮಾಡಿದರು. ಇನ್ನು, ಒಲೀ ಪೋಪ್ (39), ಜೋ ರೂಟ್ (18) ಒಂದಷ್ಟು ಹೊತ್ತು ಕ್ರೀಸ್ನಲ್ಲಿದ್ದು ಔಟಾದರೆ, ಜಾನಿ ಬೈರ್ಸ್ಟೋವ್ (0) ಬಂದ ವೇಗದಲ್ಲೇ ಹಿಂತಿರುಗಿದ್ದರು. ಇದಾದ ಬಳಿಕ ಕಣಕ್ಕಿಳಿದ ಬೆನ್ ಸ್ಟೋಕ್ಸ್ 41 ರನ್‌ಗಳೊಂದಿಗೆ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಜಡೇಜಾ ಎಸೆತದಲ್ಲಿ ಸ್ಟೋಕ್ಸ್ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಬೆನ್ ಫೋಕ್ಸ್ (13) ಪೆವಿಲಿಯನ್ ಹಾದಿ ತೋರಿಸುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ರೆಹಾನ್ ಅಹ್ಮದ್ (6) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿರಾಜ್ ಭಾರತಕ್ಕೆ 8ನೇ ಯಶಸ್ಸು ತಂದುಕೊಟ್ಟರೆ, ಟಾಮ್ ಹಾರ್ಟ್ಲಿ (9) ಜಡೇಜಾ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಇನ್ನು ಜೇಮ್ಸ್ ಅ್ಯಂಡರ್ಸನ್ (1) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸಿರಾಜ್ ಇಂಗ್ಲೆಂಡ್ ತಂಡವನ್ನು 319 ರನ್ಗಳಿಗೆ ಆಲೌಟ್ ಮಾಡಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿ ಮಿಂಚಿದರೆ, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 126 ರನ್‌ಗಳ ಬೃಹತ್ ಅಂತರದ ಮುನ್ನಡೆ ಪಡೆದುಕೊಂಡಿದೆ.

Sulekha