ಇಂಗ್ಲೆಂಡ್ ವಿರುದ್ಧ ಮೆಸ್ಸಿ ಪಡೆಗೆ ರೋಚಕ ಗೆಲುವು – 2026 ವಿಶ್ವಕಪ್ ಫೈನಲ್ ತಲುಪಿದ ಅರ್ಜೆಂಟೀನಾ

ಇಂಗ್ಲೆಂಡ್ ವಿರುದ್ಧ ಮೆಸ್ಸಿ ಪಡೆಗೆ ರೋಚಕ ಗೆಲುವು  – 2026 ವಿಶ್ವಕಪ್ ಫೈನಲ್ ತಲುಪಿದ ಅರ್ಜೆಂಟೀನಾ

ಅರ್ಜೆಂಟೀನಾ 2026 ವಿಶ್ವಕಪ್ ಫೈನಲ್ ತಲುಪಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದಂತಾಗಿದೆ. ಪಂದ್ಯದ 85ನೇ ನಿಮಿಷದವರೆಗೂ ಒಂದು ಗೋಲಿನಿಂದ ಹಿಂದಿದ್ದ ಅರ್ಜೆಂಟೀನಾ, ಕೊನೆಯ ಕ್ಷಣಗಳಲ್ಲಿ ಎರಡು ಗೋಲುಗಳನ್ನು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಮೊದಲಾರ್ಧ ಗೋಲು ರಹಿತವಾಗಿತ್ತು. ಪಂದ್ಯ ಶುರುವಾದ ಮೊದಲ ಕೆಲ ನಿಮಿಷಗಳಲ್ಲೇ ಆಟ ಸ್ವಲ್ಪ ರಫ್ ಆಗಿತ್ತು. ಆದರೆ, ಎರಡನೇ ಅವಧಿ ಶುರುವಾಗಿ ಹತ್ತೇ ನಿಮಿಷದಲ್ಲಿ ಆ್ಯಂಥನಿ ಗೋರ್ಡನ್ ಮೂಲಕ ಇಂಗ್ಲೆಂಡ್ ಮುನ್ನಡೆ ಸಾಧಿಸಿತು. ಬಲಭಾಗದಿಂದ ಮೋರ್ಗನ್ ರೋಜರ್ಸ್ ನೀಡಿದ ಅದ್ಭುತ ಕ್ರಾಸ್ ಅನ್ನು ಗೋರ್ಡನ್, ಅರ್ಜೆಂಟೀನಾ ಗೋಲ್‌ಕೀಪರ್ ಎಮಿ ಮಾರ್ಟಿನೆಜ್‌ರನ್ನು ವಂಚಿಸಿ ಗೋಲು ಬಾರಿಸಿದರು.

ಇದನ್ನೂ ಓದಿ: IND Vs BAN ಸರಣಿಗೆ ಗ್ರೀನ್ ಸಿಗ್ನಲ್ – ಅಫ್ಘಾನಿಸ್ತಾನಕ್ಕೆ ಕೈ ಕೊಡುತ್ತಾ BCCI?

ಆಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಎಂಜೊ ಫೆರ್ನಾಂಡೆಜ್ ಮೂಲಕ ಅರ್ಜೆಂಟೀನಾ ಸಮಬಲ ಸಾಧಿಸಿತು. ಇದಕ್ಕೂ ಮುನ್ನ ಎಂಜೊ ಬಾರಿಸಿದ ಒಂದು ಬಲವಾದ ಶಾಟ್ ಅನ್ನು ಪಿಕ್‌ಫೋರ್ಡ್ ತಡೆದಿದ್ದರು. ಆದರೆ, ಮೆಸ್ಸಿ ತೆಗೆದ ಕಾರ್ನರ್‌ನಿಂದ ಸಿಕ್ಕ ಅವಕಾಶದಲ್ಲಿ ಎಂಜೊ ಒಂದು ಅದ್ಭುತ ಲಾಂಗ್ ರೇಂಜರ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಪಂದ್ಯ ಮುಗಿಯಲು ಕ್ಷಣಗಣನೆ ಶುರುವಾಗಿದ್ದಾಗ, ಮೆಸ್ಸಿ ಕೊಟ್ಟ ಒಂದು ಭರ್ಜರಿ ಕ್ರಾಸ್ ಅನ್ನು ಲೌಟಾರೊ ಮಾರ್ಟಿನೆಜ್ ಗೋಲಾಗಿಸಿ ಅರ್ಜೆಂಟೀನಾಗೆ ರೋಚಕ ಗೆಲುವು ತಂದುಕೊಟ್ಟರು. ಇದೀಗ, ಜೂನ್ 19 ರಂದು ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ, ಸ್ಪೇನ್ ತಂಡವನ್ನು ಎದುರಿಸಲಿದೆ.

ಅರ್ಜೆಂಟೀನಾ ತಂಡವನ್ನು ಟೂರ್ನಿಯಿಂದ ಹೊರಹಾಕಿ ಅಭಿಯಾನ

ಫಿಫಾ ವಿಶ್ವಕಪ್ ಫೈನಲ್ ಹಂತಕ್ಕೆ ಬರುವ ಹೊತ್ತಿನಲ್ಲಿ ಅರ್ಜೆಂಟೀನಾ ತಂಡವನ್ನು ಟೂರ್ನಿಯಿಂದ ಹೊರಹಾಕಿ ಅಭಿಯಾನ ಅಂತರ್ಜಾಲದಲ್ಲಿ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಈ ಅಭಿಯಾನಕ್ಕೆ ಸಹಿ ಮಾಡಿದ್ದಾರೆ. ಇದಕ್ಕೆ ಕಾರಣ ಮ್ಯಾಚ್ ಫಿಕ್ಸಿಂಗ್ ಎನ್ನುವ ಆರೋಪ, ಮೆಸ್ಸಿ ತಂಡದ ಮೇಲಿದೆ. ಅರ್ಜೆಂಟೀನಾ ತಂಡವನ್ನು ವಿಜೇತರನ್ನಾಗಿ ಮಾಡಬೇಕೆಂದು ಫಿಫಾ ಫಿಕ್ಸಿಂಗ್ ಮಾಡಿಕೊಂಡಿದೆ. ರೆಫರಿಗಳು ಸಹ ಮೆಸ್ಸಿ ತಂಡದ ಪರವಾಗಿದ್ದಾರೆ ಎನ್ನುವ ಆರೋಪ ಎದುರಾಗಿದೆ. ಈ ಹಿನ್ನಲೆಯಲ್ಲಿ ಈ ಸಹಿ ಅಭಿಯಾನ ಆರಂಭವಾಗಿದೆ. ಆದ್ರೆ ಈ ಸಲ ಮೆಸ್ಸಿ ಪಡೆ ಫೈನಲ್‌ಗೆ ಎಂಟ್ರಿಕೊಟ್ಟಿದೆ.

Kishor KV