ಫಸ್ಟ್ ಡೇ.. 2 ಸೆಂಚುರಿ.. 300+ ರನ್ಸ್! – ENG ಬೌಲರ್ಸ್ ಬೆಂಡೆತ್ತಿದ ಇಂಡಿಯಾ

ಫಸ್ಟ್ ಡೇ.. 2 ಸೆಂಚುರಿ.. 300+ ರನ್ಸ್! – ENG ಬೌಲರ್ಸ್ ಬೆಂಡೆತ್ತಿದ ಇಂಡಿಯಾ

ಲೀಡ್ಸ್ ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ ಮೊದಲ ದಿನದಾಟದ ಅಂತ್ಯದ ವೇಳೆಗೆ ಭಾರತ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದೆ. ಪಂದ್ಯದ ಮೊದಲ ದಿನದಂದು ಭಾರತೀಯ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದ್ರಲ್ಲೂ ಟೀಮ್ ಇಂಡಿಯಾ ಪರವಾಗಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕಗಳನ್ನು ಗಳಿಸಿದರೆ, ರಿಷಭ್ ಪಂತ್ 65 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಗಿಲ್​ಗಂತೂ ಕ್ಯಾಪ್ಟನ್ ಆಗಿ ಇದು ಅವಿಸ್ಮರಣೀಯ ಸರಣಿ.

ಇದನ್ನೂ ಓದಿ : ನ್ಯೂಜಿಲೆಂಡ್ & ಆಸೀಸ್ ಸೋಲು ಮರೆಸ್ತಾರಾ – ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತದ ರೆಕಾರ್ಡ್ಸ್?

ಹೇಳಿ ಕೇಳಿ ಆಂಗ್ಲರ ನಾಡು ಬ್ಯಾಟರ್ಸ್​ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಇಲ್ಲಿ ಬ್ಯಾಟಿಂಗ್​ ನಡೆಸೋದು ಸುಲಭದ ಮಾತಲ್ಲ. ಆದ್ರೂ ಕೂಡ ಭಾರತೀಯ ಬ್ಯಾಟರ್ಸ್ ಲೀಲಾಜಾಲವಾಗಿ ಬ್ಯಾಟ್ ಬೀಸಿದ್ರು. ಅದ್ರಲ್ಲೂ ಇಂಗ್ಲೆಂಡ್​ನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್​ ಆಡಿದ ಜೈಸ್ವಾಲ್ ಅಂತೂ ತುಂಬಾನೇ ಕಾನ್ಫಿಡೆನ್ಸ್ ಆಗಿದ್ರು. ಹಾಗೇ ಕ್ಯಾಪ್ಟನ್ ಆಗಿ ಪ್ರೆಶರ್ ಇದ್ರೂ ಶುಭ್​ಮನ್ ಗಿಲ್ ಆಟವನ್ನೂ ಮೆಚ್ಚಲೇಬೇಕು. ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ, ಇಂಗ್ಲೆಂಡ್‌ ವಿರುದ್ಧ ಆಂಡರ್ಸನ್‌-ತೆಂಡೂಲ್ಕರ್‍ ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಸ್ಕೋರ್ ಮಾಡಿದೆ. ಹಾಗೇ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಕೂಡ ಒಳ್ಳೆ ಸ್ಕೋರ್ ಮಾಡಿದ್ರು. ಹೀಗಾಗೇ ಗಿಲ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 359 ರನ್‌ ಸಿಡಿಸಿದೆ.

ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಈ ಮೂಲಕ 58 ವರ್ಷಗಳ ಬಳಿಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 159 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 1 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ ಒಟ್ಟು 101 ರನ್ ಬಾರಿಸಿದ್ದಾರೆ. ಈ ಮೂಲಕ ಹೆಡಿಂಗ್ಲೆ ಮೈದಾನದಲ್ಲಿ ಗರಿಷ್ಠ ಸ್ಕೋರ್ ​ಗಳಿಸಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಫಾರೂಖ್ ಇಂಜಿನಿಯರ್ ಹೆಸರಿನಲ್ಲಿತ್ತು. 1967 ರಲ್ಲಿ ಹೆಡಿಂಗ್ಲೆ ಮೈದಾನದಲ್ಲಿ  87 ರನ್ ಬಾರಿಸಿದ್ದರು. ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ 2002 ರಲ್ಲಿ ಈ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ ಬಳಿಕ ಭಾರತದ ಯಾವುದೇ ಬ್ಯಾಟರ್ ಲೀಡ್ಸ್​ನಲ್ಲಿ ಮೂರಂಕಿ ರನ್​ಗಳ ಗಡಿದಾಟಿರಲಿಲ್ಲ.

ಈ ಸರಣಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದ್ದೇ ಹೊಸ ಕ್ಯಾಪ್ಟನ್ ಮತ್ತು ಯಂಗ್ ಸ್ಟರ್ಸ್ ಟೀಂ ಅಂತಾ. ಅದ್ರಲ್ಲೂ ನಾಯಕನಾಗಿ ಕ್ರಿಕೆಟ್ ಜೀವನವನ್ನು ಅವಿಸ್ಮರಣೀಯವಾಗಿ ಆರಂಭಿಸಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಇದೀಗ ಟೆಸ್ಟ್ ನಾಯಕತ್ವ ಹಿಸಿಕೊಂಡ ಮೊದಲ ಪಂದ್ಯದಲ್ಲೇ ಶತಕದ ಇನ್ನಿಂಗ್ಸ್ ಆಡಿದ್ದಾರೆ ಶುಭ್ ಮನ್ ಗಿಲ್. ಇಂಗ್ಲೆಂಡ್ ಸರಣಿಯೊಂದಿಗೆ ಭಾರತ ಟೆಸ್ಟ್ ತಂಡದ ಖಾಯಂ ನಾಯಕತ್ವ ವಹಿಸಿಕೊಂಡಿರುವ ಶುಭ್​ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ಹಾಗೇ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 140 ಎಸೆತಗಳನ್ನು ತೆಗೆದುಕೊಂಡ ಗಿಲ್, 14 ಬೌಂಡರಿ ಬಾರಿಸಿದರು. ಅಲ್ಲದೆ ಬೌಂಡರಿ ಬಾರಿಸುವ ಮೂಲಕವೇ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ನಾಯಕನಾಗಿ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಗಿಲ್‌ಗಿಂತ ಮೊದಲು ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡ ಈ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. 65 ರನ್​ಗಳ ಇನ್ನಿಂಗ್ಸ್‌ನಲ್ಲಿ,  ಭಾರತೀಯ ವಿಕೆಟ್‌ಕೀಪರ್ ಆಗಿ ಸೆನಾ ದೇಶಗಳಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸುವ ವಿಷಯದಲ್ಲಿ ಪಂತ್ ಅವರು ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೆನಾ ದೇಶಗಳಾಗಿವೆ. ಎಂಎಸ್ ಧೋನಿ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಗಳಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಂಗಕ್ಕಾರ ಅವರನ್ನು ಹಿಂದಿಕ್ಕಿ 3000 ರನ್ ಗಳಿಸಿದ ಏಷ್ಯಾದ ಅತ್ಯಂತ ವೇಗದ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ನಂತರ ಈ ಸಾಧನೆ ಮಾಡಿದ ಎರಡನೇ ವೇಗದ ಆಟಗಾರ ರಿಷಭ್ ಪಂತ್ ಆಗಿದ್ದಾರೆ.

18 ವರ್ಷಗಳ ಬಳಿಕ ಆಂಗ್ಲರ ನಾಡಿನಲ್ಲಿ ಗೆಲ್ಲಲೇಬೇಕು ಅನ್ನೋ ಹಠದೊಂದಿಗೆ ಕಣಕ್ಕಿಳಿದಿರೋ ಭಾರತೀಯ ತಂಡದಲ್ಲಿ ಯಂಗ್ ಸ್ಟರ್ಸ್ ಈಗಾಗ್ಲೇ ಬ್ಯಾಟಿಂಗ್ ಮೂಲಕ ಆಂಗ್ಲರನ್ನ ಕಾಡಿದ್ದಾರೆ. ಡೆಬ್ಯೂ ಮ್ಯಾಚ್​ನಲ್ಲಿ ಸಾಯಿ ಸುದರ್ಶನ್ ಡಕ್ ಔಟ್ ಆದ್ರೂ ಇತರೆ ಆಟಗಾರರು ಅದನ್ನ ಪ್ಯಾಚ್ ಅಪ್ ಮಾಡಿದ್ದಾರೆ. ಸೋ ಅಷ್ಟು ದೊಡ್ಡ ಎಫೆಕ್ಟ್ ಏನೂ ಬೀರಿಲ್ಲ. ಭಾರತ ಪರ ಇನ್ನೂ ಬ್ಯಾಟಿಂಗ್ ಲೈನಪ್ ಇರೋದ್ರಿಂದ ಮತ್ತಷ್ಟು ಬಿಗ್ ಸ್ಕೋರ್ ಬರೋ ನಿರೀಕ್ಷೆ ಇದೆ. ಬ್ಯಾಟಿಂಗ್ ನಲ್ಲಿನ ಈ ಇಂಪ್ಯಾಕ್ಟ್​​ನ ಬೌಲಿಂಗ್​ನಲ್ಲೂ ತೋರಿಸಿದ್ರೂ ಇಂಗ್ಲೆಂಡ್ ತಂಡವನ್ನ ಸದೆ ಬಡಿಯೋದ್ರಲ್ಲಿ ಡೌಟೇ ಇಲ್ಲ.

Shantha Kumari