ಜಮ್ಮು ಕಾಶ್ಮೀರದಲ್ಲಿ ಎನ್ ಕೌಂಟರ್- ಇಬ್ಬರು ಎಲ್ ಇಟಿ ಉಗ್ರರ ಹತ್ಯೆ, ಮುಂದುವರೆದ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ
ಶೋಪಿಯಾನ್: ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಮಂಗಳವಾರ ಬೆಳ್ಳಂ ಬೆಳ್ಳಗೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಉಗ್ರರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಈ ಹಿನ್ನೆಲೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಮುಂಜಾನೆಯಿಂದ ಎನ್‌ಕೌಂಟರ್ ನಡೆಯುತ್ತಿದೆ. ಹತ್ಯೆಗೀಡಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರಲ್ಲಿ ಒಬ್ಬರು ಈ ವರ್ಷದ ಆರಂಭದಲ್ಲಿ ಬ್ಯಾಂಕ್ ಗಾರ್ಡ್ ಸಂಜಯ್ ಶರ್ಮಾ ಅವರನ್ನು ಕೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದುಕೊಂಡ ಹಮಾಸ್ – ಇಸ್ರೇಲ್ ಯುದ್ಧ – ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್
ಹತ್ಯೆಗೀಡಾದ ಭಯೋತ್ಪಾದಕರನ್ನು ಲಷ್ಕರ್-ಎ-ತೊಯ್ಬಾದ ಮೋರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಅಬ್ರಾರ್ ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ.