ಗಾಜಾ ಬೆಂಬಲಕ್ಕೆ ನಿಂತಿದ್ದೇಕೆ ನಂ.1 ಶ್ರೀಮಂತ? -ಮಸ್ಕ್, ಬೈಡೆನ್ ಗೆ ಇಸ್ರೇಲ್ ಗುದ್ದು?
ಯುದ್ಧ ಅನ್ನೋದು ಯಾವತ್ತಿಗೂ ಯಾರಿಗೆ ಒಳ್ಳೇದನ್ನ ಮಾಡಿಲ್ಲ, ಮಾಡೋದೂ ಇಲ್ಲ. ಎರಡು ರಾಷ್ಟ್ರಗಳ ಅಸ್ತಿತ್ವಕ್ಕಾಗಿಯೋ ಅಥವಾ ಮತ್ತಿನ್ನೇನೋ ಕಾರಣಕ್ಕಾಗಿ ಯುದ್ಧ ಆರಂಭವಾಗಬಹುದು. ಕೊನೆಗೆ ಯಾರು ಗೆದ್ರು ಯಾರು ಸೋತ್ರು ಅನ್ನೋದಕ್ಕಿಂತ ಅದರಿಂದಾದ ಪರಿಣಾಮ ಮಾತ್ರ ಭಯಾನಕವಾದದ್ದು. ಯಾಕಂದ್ರೆ ಯುದ್ಧದಲ್ಲಿ ಅಂತಿಮವಾಗಿ ಬಲಿಯಾಗೋದು ಅಮಾಯಕರು. ಇದೀಗ ಇಸ್ರೇಲ್ ಹಮಾಸ್ ನಡುವಿನ ಯುದ್ಧದಲ್ಲಿ ಗಾಜಾಪಟ್ಟಿಯ ಸ್ಥಿತಿಯೂ ಹೀಗೇ ಆಗಿದೆ. ಇಸ್ರೇಲ್ ಸೇನೆ ನಡೆಸುತ್ತಿರೋ ದಾಳಿಗೆ ಗಾಜಾಪಟ್ಟಿ ಛಿದ್ರ ಛಿದ್ರವಾಗಿದೆ. ನಾಗರಿಕರ ಮಾರಣಹೋಮವೇ ನಡೆದಿದೆ. ಗಾಜಾದಲ್ಲಿನ ಕರುಳು ಹಿಂಡುವ ದೃಶ್ಯಗಳು ವಿಶ್ವವೇ ಮರುಗುವಂತೆ ಮಾಡಿದೆ. ಇಸ್ರೇಲ್ ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ದೇಶಗಳೇ ಗಾಜಾಜನರ ಪರವಾಗಿ ನಿಂತಿದ್ದಾರೆ. ನೆರವು ನೀಡುತ್ತಿದ್ದಾರೆ. ಇದೀಗ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಕೂಡ ಗಾಜಾಜನರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಗಾಜಾಪಟ್ಟಿ ಜನರ ಬಗ್ಗೆ ಅನುಕಂಪ ಮೂಡುತ್ತಿರೋದೇಕೆ..? ಇಸ್ರೇಲ್ ಯುದ್ಧವನ್ನ ಮತ್ತಷ್ಟು ತೀವ್ರಗೊಳಿಸಿದ್ದೇಕೆ ಅನ್ನೋ ವಿಸ್ತೃತ ಮಾಹಿತಿ ಇಲ್ಲಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಗಾಜಾಪಟ್ಟಿ ನಿವಾಸಿಗಳು ವಿಲವಿಲ ಒದ್ದಾಡ್ತಿದ್ದಾರೆ. ಹಮಾಸ್ ಬಂಡುಕೋರರು ಗಾಜಾಪಟ್ಟಿಯಲ್ಲಿ ಅಡಗಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಇಸ್ರೇಲ್ ಸೇನೆ ಇಡೀ ನಗರವನ್ನೇ ಧ್ವಂಸ ಮಾಡ್ತಿದೆ. ಹಗಲಿರುಳೆನ್ನದೆ ಬೀಳುತ್ತಿರೋ ರಾಕೆಟ್‌ಗಳು ರಕ್ತದ ಹೊಳೆಯನ್ನೇ ಹರಿಸುತ್ತಿವೆ. ಆಸ್ಪತ್ರೆಗಳು ತುಂಬಿ ತುಳುಕಿದ್ದು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಗದಂತಹ ಪರಿಸ್ಥಿತಿ ಇದೆ. ಗಾಜಾಪಟ್ಟಿ ತೊರೆಯುವಂತೆ ಅಲ್ಲಿನ ಜನ್ರಿಗೆ ಇಸ್ರೇಲ್ ವಾರ್ನಿಂಗ್ ನೀಡಿದೆ. ಹಾಗೇ ಗಾಜಾಪಟ್ಟಿಗೆ ವಿದ್ಯುತ್, ಆಹಾರ, ನೀರು ಸೇರಿದಂತೆ ಮೂಲ ಸೌಕರ್ಯಗಳನ್ನೇ ಬಂದ್ ಮಾಡಿದೆ. ಜೀವ ಉಳಿಸಿಕೊಂಡ್ರೆ ಸಾಕು ಅಂತಾ ಈಗಾಗಲೇ ಲಕ್ಷಾಂತರ ಜನ ತಾವು ಹುಟ್ಟಿ ಬೆಳೆದಿದ್ದ ನೆಲವನ್ನೇ ತೊರೆದಿದ್ದಾರೆ. ಇಷ್ಟಾದ್ರೂ ಇಸ್ರೇಲ್ ಯುದ್ಧದಾಹ ಮಾತ್ರ ತೀರಿಲ್ಲ. ಹಮಾಸ್ ಬಂಡುಕೋರರು ನಿರ್ನಾಮ ಆಗೋವರೆಗೂ ಯುದ್ಧ ನಿಲ್ಲಲ್ಲ ಅನ್ನೋ ನಿಲುವು ತಾಳಿದೆ. ಇದೇ ಕಾರಣಕ್ಕೆ ಇಸ್ರೇಲ್ ಬೆಂಬಲಿತ ರಾಷ್ಟ್ರಗಳು ಕೂಡ ಈಗ ಗಾಜಾ ಜನರ ಪರ ನಿಂತಿವೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಜೋಬೈಡೆನ್ ತಾವು ಇಸ್ರೇಲ್ ಪರ ಇದ್ದೇವೆ ಅಂತಾ ಹೇಳಿದ್ರೂ ಕೂಡ ಗಾಜಾಪಟ್ಟಿಯನ್ನ ಇಸ್ರೇಲ್ ವಶ ಪಡಿಸಿಕೊಳ್ಳೋದು ತಪ್ಪು ಅಂದಿದ್ದಾರೆ. ಅಲ್ಲದೆ ಮಾನವೀಯ ನೆಲೆಯಲ್ಲಿ ಗಾಜಾಗೆ ನೆರವನ್ನೂ ನೀಡಿದೆ. ಇದೀಗ ಅಮೆರಿಕದಲ್ಲಿ ನೆಲೆಸಿರುವ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಕೂಡ ಗಾಜಾ ಜನರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಇದನ್ನೂ ಓದಿ: ಕೇರಳ ಬ್ಲಾಸ್ಟ್ ಮಾಹಿತಿ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ? – ಕ್ರಿಶ್ಚಿಯನ್ನರ ನಡುವೆ ಏನಿದು ದೇವರ ಕದನ?
ಗಾಜಾಗೆ ಎಲಾನ್ ಮಸ್ಕ್ ಬಲ!
ಗಾಜಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ನೀಡುವುದಾಗಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ನೆರವು ನೀಡುವ ಸಂಸ್ಥೆಗಳಿಗೆ ತಮ್ಮ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ಸ್ಟಾರ್ ಲಿಂಕ್ ನಿಂದ ಸಂವಹನ ಸಂಪರ್ಕ ವ್ಯವಸ್ಥೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 2.2 ಮಿಲಿಯನ್ ಜನಸಂಖ್ಯೆ ಇರುವ ಪ್ರದೇಶಕ್ಕೆ ಎಲ್ಲಾ ರೀತಿಯ ಸಂವಹನ ವ್ಯವಸ್ಥೆ ಕಡಿತಗೊಳಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕದ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಟ್ವೀಟ್ ಮಾಡಿದ್ದರು. ಪತ್ರಕರ್ತರು, ವೈದ್ಯಕೀಯ ವೃತ್ತಿಪರರು, ಮಾನವೀಯ ಪ್ರಯತ್ನಗಳಲ್ಲಿ ತೊಡಗಿರುವವರು ಮತ್ತು ಮುಗ್ಧರು ಎಲ್ಲರೂ ಅಪಾಯದಲ್ಲಿದ್ದಾರೆ ಎಂದು ಗಾಜಾ ಪರಿಸ್ಥಿತಿಯ ಕುರಿತು ಒಕಾಸಿಯೊ-ಕಾರ್ಟೆಜ್ ತಮ್ಮ ಪೋಸ್ಟ್‌ನಲ್ಲಿ ಹೇಳಿ, ಯುಎಸ್ ಐತಿಹಾಸಿಕವಾಗಿ ಈ ರೀತಿಯ ನಡೆಗಳನ್ನು ಖಂಡಿಸಿದೆ ಎಂದು ಹೇಳಿದ್ದರು. ಇವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಮಸ್ಕ್ ಗಾಜಾಗೆ ನೆರವು ನೀಡುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಘೋಷಣೆ ಮಾಡಿದ್ದಾರೆ.
ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯನ್ನು ಹಲವು ದೇಶಗಳು ಖಂಡಿಸಿವೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ಹಮಾಸ್ ಉಗ್ರರ 100ಕ್ಕೂ ಹೆಚ್ಚು ಎಕ್ಸ್ ಖಾತೆಗಳನ್ನ ಡಿಲೀಟ್ ಮಾಡಿರೋದಾಗಿ ಹೇಳಿದ್ದರು. ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗುತ್ತಿದ್ದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಎಕ್ಸ್ ಚಟವಟಿಕೆಗಳು ಹೆಚ್ಚಾಗಿದ್ದವು. ಈ ಪ್ರದೇಶದಲ್ಲಿ ಸರಾಸರಿ ಚಟುವಟಿಕೆಗಿಂತ ಗಣನೀಯ ಏರಿಕೆ ಕಂಡಿತ್ತು. ಇಸ್ರೇಲ್ ಹಾಗೂ ಗಾಜಾ ಪ್ರದೇಶದಲ್ಲಿ ದಿನಕ್ಕೆ 50 ಮಿಲಿಯನ್ಗೂ ಅಧಿಕ ಪೋಸ್ಟ್‌ಗಳನ್ನು ಮಾಡಲಾಗುತ್ತಿತ್ತು. ಹೀಗಾಗಿ ಎಕ್ಸ್ ಖಾತೆಗಳಲ್ಲಿ ಭಯೋತ್ಪಾದನೆ, ಉಗ್ರವಾದವನ್ನು ಪ್ರಚುರ ಪಡಿಸುವ ವಿಡಿಯೋ, ಫೋಟೋ, ಸಂದೇಶಗಳನ್ನು ಹಾಕುತ್ತಿದ್ದಾರೆ. ಭಯೋತ್ಪಾದನೆ ಪ್ರಚೋದಿಸುವ ವಿಷಯಗಳನ್ನು ಟ್ವಿಟರ್ನಿಂದ ತೆಗೆದು ಹಾಕಲಾಗುತ್ತಿದೆ. ಹಮಾಸ್ ಉಗ್ರರ ಸಂಬಂಧಿತ ಕೆಲ ಪ್ರಮುಖ ಎಕ್ಸ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಗಾಜಾ ಜನರಿಗೆ ನೆರವು ನೀಡಲು ಮುಂದಾಗಿರು ಎಲಾನ್ ಮಸ್ಕ್ ಇಸ್ರೇಲ್ ಪ್ರಧಾನಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಕಳೆದ ಬಾರಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟೆಸ್ಲಾ ಸಿಇಐ ಎಲಾನ್ ಮಸ್ಕ್ ಅವ್ರನ್ನ ಭೇಟಿಯಾಗಿದ್ರು. ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ನೆತನ್ಯಾಹು ಅವರನ್ನು ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿರುವ ಟೆಸ್ಲಾ ಕಾರ್ಖಾನೆಯ ಪ್ರವಾಸಕ್ಕೆ ಎಲಾನ್ ಮಸ್ಕ್ ಕರೆದೊಯ್ದಿದ್ದರು. ಕಾರ್ಖಾನೆಯ ಸುತ್ತಲೂ ಸೈಬರ್ ಟ್ರಕ್ ಕಾರಿನಲ್ಲಿ ಮೂವರು ಸವಾರಿ ಮಾಡಿದ್ದರು. ಇಸ್ರೇಲ್ ಪ್ರಧಾನಿ ನೆತನ್ಯಾಹು ಈ ಫೋಟೋಗಳನ್ನ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದರು. ಹೀಗೆ ನೆತನ್ಯಾಹು ಜೊತೆ ಉತ್ತಮ ಒಡನಾಟ ಹೊಂದಿರುವ ಮಸ್ಕ್ ಇದೀಗ ಗಾಜಾ ಜನರಿಗೆ ಸಂವಹನ ಸಂಕರ್ಪ ನೆರವನ್ನ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ವಿಶ್ವದ ನಂಬರ್ 1 ಶ್ರೀಮಂತ, ಬಿಲೇನಿಯರ್, ಟೆಸ್ಲಾ ಕಂಪನಿ ಸಿಇಎ ಎಲಾನ್ ಮಸ್ಕ್ ಮಾತ್ರವಲ್ಲ. ಅಮೆರಿಕ ಅಧ್ಯಕ್ಷ ಜೋಬೈಡನ್ ಕೂಡ ಇದೇ ರೀತಿಯ ಧೋರಣೆ ಹೊಂದಿದ್ದಾರೆ. ಇಸ್ರೇಲ್ ಪರ ನಾವಿದ್ದೇವೆ, ಹಮಾಸ್ ಪಡೆಯನ್ನ ನಿರ್ನಾಮ ಮಾಡುವವರೆಗೂ ಯುದ್ಧ ನಿಲ್ಲೋದು ಬೇಡ ಎಂದ್ದೇ ಹೇಳಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಕೂಡ ಕದನ ವಿರಾಮ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ. ಯುದ್ಧ ಮುಂದುವರಿಸಬೇಕೆಂದು ಇಸ್ರೇಲ್ ಮತ್ತು ಅಮೆರಿಕ ದೇಶಗಳು ಮತ ಹಾಕಿವೆ. ಇಷ್ಟಾದ್ರೂ ಬೈಡನ್ ಗಾಜಾಪಟ್ಟಿಗೆ ಮಾನವೀಯ ನೆರವು ತಿಳಿಸಿದ್ದಾರೆ. ಈ ಬಗ್ಗೆಯೂ ಹೇಳ್ತೇನೆ ನೋಡಿ.
ಇಸ್ರೇಲ್ ಗೆ ಬೆಂಬಲ.. ಗಾಜಾಗೆ ನೆರವು!
ಯುದ್ಧದ ಆರಂಭದಲ್ಲೇ ಇಸ್ರೇಲ್ ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೇ ವೇಳೆ ಪ್ಯಾಲೆಸ್ತೀನ್ನ ಯುದ್ಧಪೀಡಿತ ಗಾಜಾ ಹಾಗೂ ವೆಸ್ಟ್ ಬ್ಯಾಂಕ್ ಗೆ $100 ಮಿಲಿಯನ್ ಮಾನವೀಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೆ ಗಾಜಾಕ್ಕೆ ಮಾನವೀಯ ನೆರವು ನೀಡಲು ಈಜಿಪ್ಟ್ ಗೆ ವಿನಾಯಿತಿ ನೀಡಬೇಕೆಂದು ಇಸ್ರೇಲ್ಗೆ ಒತ್ತಾಯಿಸಿದ್ರು. ಇದಕ್ಕೆ ಇಸ್ರೇಲ್ ಷರತ್ತು ಬದ್ಧ ವಿನಾಯಿತಿಗೆ ಒಪ್ಪಿಗೆ ನೀಡಿದ್ರು. ಗಾಜಾದ ಜನರಿಗೆ ಆಹಾರ, ನೀರು, ಔಷಧಿ ಮತ್ತು ಆಶ್ರಯದ ಅಗತ್ಯವಿದೆ ಹೀಗಾಗಿ ಮಾನವೀಯ ನೆರವು ನೀಡಲು ಇಸ್ರೇಲಿ ಕ್ಯಾಬಿನೆಟ್ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಿದ್ದರು. ಹಾಗೇ ತಾವು ನೆರವು ನೀಡುತ್ತಿರುವುದು ಪ್ಯಾಲೆಸ್ತೀನ್ ಜನರಿಗೆ ಮಾತ್ರವೇ ಹೊರತು ಹಮಾಸ್ ಅಥವಾ ಭಯೋತ್ಪಾದಕ ಗುಂಪುಗಳಿಗಲ್ಲ ಎಂದು ಜೋಬೈಡನ್ ತಮ್ಮ ಎಕ್ಸ್ ಖಾತೆಯಲ್ಲೂ ಬರೆದುಕೊಂಡಿದ್ದರು.
ಇಡೀ ವಿಶ್ವವೇ ಗಾಜಾ ಪರ ಅನುಕಂಪ ತೋರಿಸುತ್ತಿದ್ರೂ ಇಸ್ರೇಲ್ ರಕ್ಷಣಾ ಪಡೆ ಉತ್ತರ ಗಾಜಾದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಒಂದು ಕಡೆ ಭೂ ದಾಳಿ ನಡೆಸಿದರೆ ಮತ್ತೊಂದು ಕಡೆ ವಾಯು ದಾಳಿಯ ಮೂಲಕ ಹಮಾಸ್ ಉಗ್ರರ ವಿರುದ್ಧದ ಕದನವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದಿದೆ. ಹಮಾಸ್ ಪಡೆಯೇ ಟಾರ್ಗೆಟ್ ಎನ್ನುತ್ತಿರೋ ಇಸ್ರೇಲ್ ಈಗ ಭೂದಾಳಿಯನ್ನೇ ನಡೆಸುತ್ತಿದ್ದಾರೆ. ಈಗಾಗಲೇ ಹಮಾಸ್ ಬಂಡುಕೋರರ 150 ಸುರಂಗಗಳನ್ನು ಧ್ವಂಸಗೊಳಿಸಿರೋದಾಗಿ ಹೇಳಿಕೊಂಡಿದೆ. ಅಲ್ಲದೆ ಗಾಜಾದ ಅತಿದೊಡ್ಡ ಆಸ್ಪತ್ರೆಯ ಕೆಳಗೆ ಹಮಾಸ್ ಬಂಡುಕೋರರ ಮುಖ್ಯಕಚೇರಿ ಇದೆ ಎಂದು ವಿಡಿಯೋ ಕೂಡ ರಿಲೀಸ್ ಮಾಡಿದೆ. ಆದ್ರೆ ಹಮಾಸ್ ನಾಯಕರು ಈ ಆರೋಪವನ್ನ ತಳ್ಳಿ ಹಾಕಿದ್ದಾರೆ. ಈಗಾಗಲೇ ಗಾಜಾವನ್ನು ಬಹುತೇಕ ನಾಶ ಮಾಡಿರುವ ಇಸ್ರೇಲ್ ಸೇನೆ ಸಂಪೂರ್ಣವಾಗಿ ಹಮಾಸ್ ಪಡೆಯನ್ನ ನಿರ್ನಾಮ ಮಾಡದೆ ವಿರಮಿಸೋದಿಲ್ಲ ಎಂದು ಘೋಷಿಸಿದೆ. ಯುದ್ಧ ಬಯಸಿದ್ದು, ಆರಂಭಿಸಿದ್ದು ನಾವಲ್ಲ. ಹಮಾಸ್ ವಿರುದ್ಧ 2ನೇ ಹಂತದ ದಾಳಿ ನಡೆಸೋದಾಗಿ ಇಸ್ರೇಲ್ ಸೇನಾಪಡೆ ಹೇಳಿದೆ.
ಗಾಜಾ ಸುತ್ತ ಇಸ್ರೇಲ್ ಸೇನೆ!
ಯುದ್ಧ ಬಯಸಿದ್ದು, ಆರಂಭಿಸಿದ್ದು ನಾವಲ್ಲ, ಹೀಗಾಗಿ ಹಮಾಸ್ ವಿರುದ್ಧ 2ನೇ ಹಂತದ ದಾಳಿಗೆ ಸಜ್ಜಾಗಿದ್ದೇವೆ. ಗಾಜಾ ವಿರುದ್ಧ ಭೂಮಿ, ವಾಯು, ಸಮುದ್ರದಿಂದಲೂ ದಾಳಿ ಮಾಡುತ್ತೇವೆಂದು ಇಸ್ರೇಲ್ ಸೇನಾಪಡೆಯ ವಕ್ತಾರ ಡೆನಿಯಲ್ ಹಗರಿ ವಿಡಿಯೋ ಸಂದೇಶ ನೀಡಿದ್ದಾರೆ. ಇಸ್ರೇಲ್ ಸೇನಾಪಡೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಹಮಾಸ್ ವಿರುದ್ಧ 2ನೇ ಹಂತದ ದಾಳಿಗೆ ಮುಂದಾಗಿದ್ದೇವೆ. ಗಾಜಾದಲ್ಲಿ ಭೂಮಿ, ಸಮುದ್ರ ಹಾಗೂ ವಾಯು ಮೂಲಕ ದಾಳಿ ನಡೆಸಲಾಗುತ್ತದೆ. ಅಕ್ಟೋಬರ್ 7 ರಂದು ಹಮಾಸ್ ಮಾನವೀಯತೆಯ ಮೇಲೆ ಅಪರಾಧವೆಸಗಿತ್ತು. ಯುದ್ಧವನ್ನು ಇಸ್ರೇಲ್ ಆರಂಭಿಸಿರಲಿಲ್ಲ. ಇಸ್ರೇಲ್ ಯುದ್ಧವನ್ನು ಬಯಸಿಯೂ ಇರಲಿಲ್ಲ. ಇಸ್ರೇಲಿಗರ ಮೇಲೆ ಹಮಾಸ್ ದಾಳಿ ನಡೆಸಿತ್ತು. ಇದು ಅಪರಾಧ. ಇದೀಗ ಹಮಾಸ್ ಉಗ್ರರು ನಾಗರಿಕರನ್ನು ಗುರಾಣಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಹೋರಾಟ ಹಮಾಸ್ ವಿರುದ್ಧವೇ ಹೊರತು ಗಾಜಾದಲ್ಲಿರುವ ಜನತೆಯ ವಿರುದ್ಧವಲ್ಲ. ಆದರೆ, ಹಮಾಸ್ ಅಲ್ಲಿನ ನಾಗರಿಕರನ್ನು ಗುರಾಣಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಶಾಲೆ, ಮಸೀದಿ ಹಾಗೂ ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಮಾಸ್ ಉಗ್ರರು ನಾಗರೀಕ ಕಟ್ಟಡಗಳ ಒಳಗೆ ಹಾಗೂ ಸುರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಸ್ರೇಲ್ ಸೇನಾಪಡೆ ಭಯೋತ್ಪಾದಕರು ಹಾಗೂ ನಾಗರೀಕರ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲದು. ಹೀಗಾಗಿಯೇ ಹಮಾಸ್ ನಿಂದ ದೂರ ಸರಿಯುವಂತೆ ಜನತೆಗೆ ವಾರಗಳಿಂದ ಎಚ್ಚರಿಕೆ ನೀಡಲಾಗುತ್ತಿದೆ. ಉತ್ತರ ಗಾಜಾ ಮತ್ತು ಗಾಜಾ ನಗರದಲ್ಲಿರುವ ನಾಗರಿಕರು ದಕ್ಷಿಣಕ್ಕೆ ತೆರಳುವಂತೆ ಎಚ್ಚರಿಕೆ ನೀಡುತ್ತಿದ್ದೇವೆ. ಆ ಪ್ರದೇಶದಲ್ಲಿ ನೀರು, ಆಹಾರ ಮತ್ತು ಔಷಧಗಳನ್ನು ನೀಡಲಾಗುತ್ತಿದೆ ಎಂದು ಇಸ್ರೇಲ್ ಸೇನಾ ಪಡೆಯ ವಕ್ತಾರ ಹೇಳಿದ್ದಾರೆ.
ಇಸ್ರೇಲ್ ಹಮಾಸ್ ನಡುವಿನ ಯುದ್ಧದಿಂದ ಗಾಜಾಪಟ್ಟಿ ಸರ್ವನಾಶವಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳು ಸಾವಿನ ಮನೆ ಸೇರುತ್ತಿದ್ದಾರೆ. ಹುಟ್ಟಿ ಬೆಳೆದ ನೆಲೆಯನ್ನೇ ಬಿಟ್ಟು ಅಲ್ಲಿನ ನಿವಾಸಿಗಳು ವಲಸೆ ಹೋಗುತ್ತಿದ್ದಾರೆ. ಆದ್ರೆ ಇಸ್ರೇಲ್ ಮಾತ್ರ ಯುದ್ಧ ಮುಂದುವರಿಸೋದಾಗಿ ಹೇಳಿರೋದು ಮತ್ತಷ್ಟು ಆತಂಕ ಮೂಡಿಸಿದೆ. ಇಡೀ ಗಾಜಾ ನಗರವೇ ಇಸ್ರೇಲ್ ಕಪಿಮುಷ್ಟಿಯಲ್ಲಿದ್ದು ಅಲ್ಲಿನ ಜನರ ಜೀವನ ಅಕ್ಷರಶಃ ನರಕವಾಗಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ಎಲ್ಲದರಿಂದಲೂ ದೂರವೇ ಉಳಿದಿದೆ. ವಿಶ್ವಸಂಸ್ಥೆಯಲ್ಲಿ ನಡೆದ ಕದನವಿರಾಮ ನಿರ್ಣಯದಿಂದಲೂ ದೂರ ಉಳಿದಿದೆ. ಆದ್ರೆ ಮಾನವೀಯ ನೆಲೆಯಿಂದ ಗಾಜಾಗೆ ವೈದ್ಯಕೀಯ ಸೇರಿದಂತೆ ನೆರವು ನೀಡೋದನ್ನ ಮರೆತಿಲ್ಲ.