ಮಾನವನ ಮೆದುಳಿಗೆ ಚಿಪ್! – ಅಂಧರ ಪಾಲಿಗೆ ಆಶಾಕಿರಣವಾಗಲಿದ್ಯಾ ಎಲಾನ್ ಮಸ್ಕ್ ಹೊಸ ಪ್ರಾಜೆಕ್ಟ್

ಮಾನವನ ಮೆದುಳಿಗೆ ಚಿಪ್! – ಅಂಧರ ಪಾಲಿಗೆ ಆಶಾಕಿರಣವಾಗಲಿದ್ಯಾ ಎಲಾನ್ ಮಸ್ಕ್ ಹೊಸ ಪ್ರಾಜೆಕ್ಟ್

ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ನ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ತಮ್ಮ ನಿರ್ಧಾರಗಳ ಮೂಲಕ ಬಾರಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮಾನವನ ಮೆದುಳಿಗೆ ಚಿಪ್‌ ಅಳವಡಿಸಿ ಮನುಷ್ಯನಿಗೆ ಅತಿಮಾನವ ಶಕ್ತಿ ನೀಡುವ ಕಥೆಯನ್ನು ಎಲಾನ್ ಮಸ್ಕ್ ಅವರು ನಿಜ ಮಾಡಲು ಹೊರಟಿದ್ದಾರೆ.

ಎಲಾನ್ ಮಸ್ಕ್ ಅವರ ಒಡೆತನದ ನ್ಯೂರಾಲಿಂಕ್ ಕಂಪನಿ ಮುಂದಿನ ಆರು ತಿಂಗಳಲ್ಲಿ ಮಾನವನ ಮೆದುಳಿಗೆ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಅಳವಡಿಸಲು ಸಾಧ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ ಮುಂಬರುವ ವರ್ಷಗಳಲ್ಲಿ ತಾವು ಕೂಡಾ ಈ ಚಿಪ್‌ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: 52 ವರುಷಗಳ ನಂತರ ನನಸಾದ ಚಂದ್ರಯಾನದ ಕನಸು – ಡಿಸೆಂಬರ್ 11 ಕ್ಕೆ ಮರಳಿಬರಲಿದೆ ಒರಾಯನ್ ನೌಕೆ

ಮಸ್ಕ್ ಒಡೆತನದ ನ್ಯೂರಾಲಿಂಕ್ ಸಂಸ್ಥೆ ಸರ್ಜಿಕಲ್ ರೋಬೋಟ್ (ಆರ್‌1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಒಂದನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಈ ಬ್ರೈನ್ ಚಿಪ್ ಅನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದೆ. ಇದನ್ನು ಇದೀಗ ಮಾನವನ ಮೇಲೆ ಪ್ರಯೋಗ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಮಾನವರ ಮೆದುಳಿನಲ್ಲಿ ಬ್ರೈನ್ ಚಿಪ್‌ ಅಳವಡಿಸಲು ಅಗತ್ಯವಾದ ದಾಖಲೆಗಳನ್ನು ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದೆ. ಅದು ಅನುಮತಿ ನೀಡಿದರೆ ಮುಂದಿನ 6 ತಿಂಗಳಲ್ಲಿ ಮೆದುಳಿನಲ್ಲಿ ಚಿಪ್‌ ಅಳವಡಿಸುವ ಕಾರ್ಯ ಆರಂಭವಾಗಲಿದೆ.

ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಬ್ರೈನ್-ಚಿಪ್ ಸಹಾಯದಿಂದ ಮಾನವನ ಮೆದುಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಮರೆವಿನ ರೋಗ, ಪಾರ್ಕಿನ್ಸನ್ ತೊಂದರೆಯಿಂದ ಬಳಲುತ್ತಿರುವವರು ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಕುರುಡಾಗಿ ಹುಟ್ಟಿದ ವ್ಯಕ್ತಿಯ ದೃಷ್ಟಿಯನ್ನು ಪುನಃಸ್ಥಾಪಿಸಲು, ಬೆನ್ನುಹುರಿ ಹೊಂದಿರದ ಜನರು ಚಲಿಸಲು ಸಾಧ್ಯವಾಗುವುದು ಸೇರಿದಂತೆ, ಇಡೀ ಮಾನವನ ದೇಹವನ್ನು ಪುನಃಸ್ಥಾಪಿಸುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಯಂತ್ರಗಳ ಜೊತೆ ಮಾನವನು ಮೆದುಳಿನಿಂದಲೇ ಮಾತನಾಡಲೂ ಕೂಡ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಈ ಬ್ರೈನ್-ಚಿಪ್ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ಎಲೆಕ್ಟ್ರೋಡ್ ವೈರ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರೋಡ್ ವೈರ್‌ಗಳು ಮೆದುಳಿನ ಭಾಗದೊಂದಿಗೆ ಸಂಪರ್ಕ ಬೆಳೆಸಲಿವೆ. ಇದು ಮೆದುಳಿಗೆ ಬರುವ ಸಂದೇಶ ಸಂಗ್ರಹ ಹಾಗೂ ಮೆದುಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ಈ ಮೂಲಕ ವ್ಯಕ್ತಿಯು ಮನಸ್ಸಿನಲ್ಲಿ ಅಂದುಕೊಂಡ ವಿಷಯವನ್ನು ಮಾಡುವುದು ಸಾಧ್ಯವಾಗುತ್ತದೆ. ಅಂದರೆ ಚಿಪ್‌ ಅಳವಡಿಸಿದ ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಮೊಬೈಲ್‌ ಆನ್‌ ಮಾಡಬೇಕು ಅಥವಾ ಕರೆ ಮಾಡಬೇಕೆಂದು ಬಯಸಿದರೆ ಆ ಸಂದೇಶ ಚಿಪ್‌ ಮೂಲಕ ನೇರವಾಗಿ ಮೊಬೈಲ್‌ಗೆ ರವಾನೆಯಾಗಿ ಮೊಬೈಲ್‌ ಆನ್‌ ಮಾಡಲು ಸಾಧ್ಯವಾಗಲಿದೆ.

ಈ ಬ್ರೈನ್-ಚಿಪ್ ಅನ್ನು ಮೆದುಳಿನಿಂದ ಸಂದೇಶ ರವಾನಿಸುವ ಸಮಸ್ಯೆ ಇರುವವರಿಗೆ ಮೊದಲು ಅಳವಡಿಸುವ ನಿರೀಕ್ಷೆ ಇದೆ. ಈಗಾಗಲೇ ಬ್ರೈನ್‌ಡೆಡ್ ಆಗಿರುವ ವ್ಯಕ್ತಿಗೆ ಈ ಚಿಪ್‌ ಅಳವಡಿಸಿ ಚಿಪ್ ಮೂಲಕ ಕೃತಕವಾಗಿ ದೇಹದ ಅಂಗಗಳಿಗೆ ವಿವಿಧ ಸಂದೇಶಗಳ ರವಾನೆ ಮಾಡುವ ಯೋಜನೆ ಇದೆ. ಅತ್ಯಂತ ಕ್ಲಿಷ್ಟಪ್ರಕ್ರಿಯೆಯಾಗಿರುವ ಈ ಚಿಪ್‌ ಅಳವಡಿಕೆಗಾಗಿಯೇ ವಿಶೇಷ ರೋಬೋಟ್‌ ಅಭಿವೃದ್ಧಿಪಡಿಸಿದ್ದು, ಅದು ಶಸ್ತ್ರಚಿಕಿತ್ಸೆ ನಡೆಸಿ ಚಿಪ್‌ ಅನ್ನು ಮೆದುಳಿನಲ್ಲಿ ಕೂರಿಸಲಿದೆ. “ನಾವು ಅತ್ಯಂತ ಜಾಗರೂಕರಾಗಿರಲು ಬಯಸುತ್ತೇವೆ ಮತ್ತು ಮಾನವನಿಗೆ ಈ ಸಾಧನವನ್ನು ಹಾಕುವ ಮೊದಲು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮಸ್ಕ್ ಅವರು ಹೇಳಿದ್ದಾರೆ.

suddiyaana