ವ್ಯಕ್ತಿ ಮೇಲೆ ದಾಳಿ ಮಾಡಿದ ಮೇಲೆ ಎಚ್ಚೆತ್ತ ಅರಣ್ಯಇಲಾಖೆ – ಹುಲಿ ಸೆರೆಹಿಡಿಯಲು ಕಾರ್ಯಾಚರಣೆಗಿಳಿದ ಗಜಪಡೆ
ಹುಲಿಗಳ ಕಾಟ, ಚಿರತೆಗಳ ಕಾಟದಿಂದ ನಮ್ಮನ್ನು ಕಾಪಾಡಿ ಅಂದರೆ ಯಾರೂ ಬರುವುದಿಲ್ಲ. ಅರಣ್ಯಾಧಿಕಾರಿಗಳು ಫೀಲ್ಡಿಗೆ ಇಳೀಬೇಕು ಅಂದರೆ ಅಲ್ಲಿ ಯಾರದ್ದಾದರೂ ಒಬ್ಬರ ಬಲಿಯಾಗಿರಲೇಬೇಕೋ ಏನೋ. ಈಗ ಇಲ್ಲಾಗಿದ್ದೂ ಅಷ್ಟೇ. ಅಲ್ಲಿನ ಜನ ಹುಲಿ ಓಡಾಡುತ್ತಿದೆ. ಜಾನುವಾರುಗಳು ಕಣ್ಮರೆಯಾಗುತ್ತಿದೆ ಎಂದು ಅದೆಷ್ಟೋ ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅರಣ್ಯ ಇಲಾಖೆಗೆ ಇದೆಲ್ಲಾ ಮಾಮೂಲಿ. ಯಾವಾಗ ಮನುಷ್ಯರ ಮೇಲೆ ದಾಳಿ ಮಾಡಿದ್ದು ಸಾಕ್ಷಿ ಸಿಗುತ್ತೋ ಆಗ ಹುಲಿ ಹಿಡಿತೀವಿ ಅಂತಾ ಬಂದು ಬಿಟ್ಟಿದ್ದಾರೆ.
ಇದನ್ನೂ ಓದಿ: ರೈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಹುಲಿ – ಮೈಸೂರಿನಲ್ಲಿ ವ್ಯಾಘ್ರನಿಗೆ ಆಹಾರವಾದ ಅನ್ನದಾತ
ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ನಂಜನಗೂಡು ಭಾಗದಲ್ಲಿ ಕಾಡು ಪ್ರಾಣಿಗಳು ರೈತರ ನಿದ್ದೆಗೆಡಿಸಿವೆ. ಅದರಲ್ಲೂ ಬಂಡೀಪುರ ಅರಣ್ಯದ ಹೆಡಿಯಾಲ ವಲಯ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಮೂರು ದಿನಗಳ ಹಿಂದೆ ವ್ಯಾಘ್ರನ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಇದೀಗ ಆ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಚರಣೆ ನಡೆಸಿದ್ದು, ಈಗ ವ್ಯಾಘ್ರನ ಪತ್ತೆಗೆ ಆನೆಗಳನ್ನು ಕರೆತರಲಾಗಿದೆ.
ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಚರಣೆ ಸಂದರ್ಭದಲ್ಲೇ ಹುಲಿ ಮೇಕೆಯನ್ನ ಹೊತ್ತೊಯ್ದಿತ್ತು. ಇದರಿಂದ ಸ್ಥಳೀಯರು ಕೂಡಾ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ, ವ್ಯಾಘ್ರನ ಬಂಧನಕ್ಕೆ ಬಂಡೀಪುರ, ರಾಂಪುರ ಆನೆ ಕ್ಯಾಂಪ್‌ನಿಂದ ಆನೆಗಳನ್ನು ಕರೆತಂದು ಕಾರ್ಯಾಚರಣೆಗೆ ಇಳಿಸಿದೆ.
ಮತ್ತೊಂದೆಡೆ ನಂಜನಗೂಡು ತಾಲ್ಲೂಕು ಮಹದೇವ ನಗರ ಗ್ರಾಮದಲ್ಲಿ ಹುಲಿಯೊಂದು ಆತಂಕ ಸೃಷ್ಟಿಸಿದೆ. ಕಾಡಂಚಿನಲ್ಲಿ ಹಸು ಮೇಯಿಸುವಾಗ ಹುಲಿಯೊಂದು ಹಸು ಮತ್ತು ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಅಷ್ಟೇ ಅಲ್ಲ, ಈ ವೇಳೆ ಹಸು ಮೇಯಿಸುತ್ತಿದ್ದ ಮಹದೇವ ನಗರದ ವೀರಭದ್ರ ಬೋವಿ ಎಂಬುವವನ ಮೇಲೂ ದಾಳಿ ಮಾಡಿದೆ. ಅದೃಷ್ಟವಶಾತ್ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಬಂದ ಹಿನ್ನೆಲೆ ಹುಲಿ ವೀರಭದ್ರ ಬೋವಿಯನ್ನು ಬಿಟ್ಟು, ಓಡಿ ಹೋಗಿದೆ. ಸದ್ಯ ಹುಲಿ ದಾಳಿಯಿಂದ ಗಾಯಗೊಂಡಿರುವ ವೀರಭದ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೀರಭದ್ರನ ಬೆನ್ನು, ಮುಖ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಇನ್ನು ವೀರಭದ್ರ ಬೋವಿ ಮೇಲೆ ದಾಳಿ ಮಾಡಿದ ಹುಲಿ, ಅಲ್ಲಿಯೇ ಅಕ್ಕ-ಪಕ್ಕದ ಜಮೀನಿನಲ್ಲಿ ಓಡಾಡುತ್ತಿದೆ. ಹುಲಿ ಓಡಾಡುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಸ್ಥಳೀಯರ ಆತಂಕಕ್ಕೆ ಕೂಡ ಕಾರಣವಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ತಮ್ಮ ಬೆಳೆಗಳ ಬಗ್ಗೆ ಗಮನಹರಿಸಲು ಆಗುತ್ತಿಲ್ಲ. ದೈನಂದಿನ ಕೆಲಸಗಳಿಗೆ ಹೋಗಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಈ ಆತಂಕ ಆಕ್ರೋಶವಾಗಿ ಬದಲಾಗಿದೆ. ಇದರ ಪ್ರತಿಫಲವಾಗಿ ಹುಲಿ ದಾಳಿ ಸ್ಥಳ ಪರಿಶೀಲನೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಅರಣ್ಯ ಇಲಾಖೆ ವಾಹನವನ್ನು ಪಲ್ಟಿ ಮಾಡಲು ಯತ್ನಿಸಿದ್ದರು. ಕೊನೆಗೆ ಕೆಲ ಸ್ಥಳೀಯರೇ ಸಮಾಧಾನಪಡಿಸಿ ಸಿಬ್ಬಂದಿಯ ರಕ್ಷಣೆ ಮಾಡಿದ್ದರು. ಇನ್ನು ಈ ಭಾಗದಲ್ಲಿ ಹುಲಿ ದಾಳಿ ಇದೇ ಮೊದಲೇನಲ್ಲ, ಕಳೆದ ವರ್ಷ ಹಾದನೂರು, ಒಡೆಯನಪುರ ಗ್ರಾಮದ ದನಗಾಹಿ ಒಬ್ಬರನ್ನು ಹುಲಿ ಬಲಿ ಪಡೆದುಕೊಂಡಿತ್ತು. ಅದೇ ಹುಲಿ ಈಗ ಮತ್ತೆ ದಾಳಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಒಂದು ವರ್ಷ ಕಳೆದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ಹಂತವಾಗಿ ಹುಲಿ ದಾಳಿ ಮಾಡಿದ ಹತ್ತಿರ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟು 6 ಕ್ಯಾಮೆರಾಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದಾರೆ. ಜೊತೆಗೆ ಹುಲಿ ಸಂರಕ್ಷಣಾ ವಿಶೇಷ ಪಡೆಯಿಂದ ಹುಲಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಹುಲಿಯ ಹೆಜ್ಜೆ ಗುರುತು ಹುಲಿಯ ಪಿಕ್ಕೆಗಳ ಹುಡುಕಾಟದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಹುಲಿಯಿರುವ ಬಗ್ಗೆ ಮಾಹಿತಿ ಲಭ್ಯವಾದರೆ, ಹುಲಿ ಸೆರೆ ಕಾರ್ಯಾಚರಣೆಗೆ ಸಾಕಾನೆಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಧಾರ ಮಾಡಿದೆ.