ಮರಿಗಳ ರಕ್ಷಣೆಗೆ ಭದ್ರಕೋಟೆ ನಿರ್ಮಿಸಿದ ಗಜಪಡೆ – ಆನೆಗಳ ಬುದ್ಧಿವಂತಿಕೆಗೆ ಬೆರಗಾದ ಜನ

ಮರಿಗಳ ರಕ್ಷಣೆಗೆ ಭದ್ರಕೋಟೆ ನಿರ್ಮಿಸಿದ ಗಜಪಡೆ – ಆನೆಗಳ ಬುದ್ಧಿವಂತಿಕೆಗೆ ಬೆರಗಾದ ಜನ

ಮಕ್ಕಳನ್ನ ಎಷ್ಟು ಜೋಪಾನ ಮಾಡಿದರೂ ಸಾಲೋದಿಲ್ಲ. ಅತ್ತಿಂದಿತ್ತ ಓಡಾಡುತ್ತಾ ಒಂದಿಲ್ಲೊಂದು ಕೀಟಲೆ ಮಾಡುತ್ತಾರೆ. ನಾಡಿನಲ್ಲಿ ಮನುಷ್ಯರಿಗೆ ಮಕ್ಕಳನ್ನ ಹಿಡಿಯೋದೇ ಕೆಲಸ ಆಗುತ್ತದೆ. ಆದರೆ ಕಾಡಿನಲ್ಲಿರೋ ಪ್ರಾಣಿಗಳಿಗೆ ತಮ್ಮ ಮರಿಗಳನ್ನ ರಕ್ಷಣೆ ಮಾಡಿಕೊಳ್ಳುವುದೇ ಸವಾಲಿನ ಕೆಲಸ. ಮರಿಗಳು ಬೆಳೆದು ದೊಡ್ಡವಾಗುವವರೆಗೂ ಕಣ್ಣಿನಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತವೆ. ಸದ್ಯ ಇಲ್ಲಿ ಆನೆಗಳ ಹಿಂಡೊಂಡು ತಮ್ಮ ಮರಿಗಳಿಗೆ ಸರಪಳಿ ನಿರ್ಮಿಸಿ ಕ್ರೂರ ಮೃಗಗಳಿಂದ ರಕ್ಷಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು – ಐದು ತಿಂಗಳಲ್ಲಿ 7 ನೇ ಸಾವು

ಮನುಷ್ಯರು ತಮ್ಮ ಮಕ್ಕಳನ್ನ ಹೇಗೆ ಮುತುವರ್ಜಿಯಿಂದ ಜೋಪಾನ ಮಾಡುತ್ತಾರೋ ಅಷ್ಟೇ ಕಾಳಜಿ, ಪ್ರೀತಿಯನ್ನ ಪ್ರಾಣಿಗಳೂ ತೋರುತ್ತವೆ. ಅದರಲ್ಲೂ ದೈತ್ಯಪ್ರಾಣಿಗಳಾದ ಆನೆಗಳು ತಮ್ಮ ಬಳಗವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಹಿಂಡಿನಲ್ಲಿರುವ ದೊಡ್ಡ ಆನೆಗಳು ಕಿರಿಯ ಆನೆಗಳ ಕಾಳಜಿ ವಹಿಸುತ್ತವೆ, ಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತವೆ. ಅದರಲ್ಲೂ ಆನೆಗಳು ಮರಿಗಳನ್ನು ರಕ್ಷಿಸುವ ಪರಿಯಂತು ಅದ್ಭುತ. ಇವುಗಳ ಒಗ್ಗಟ್ಟೇ ಅದ್ಭುತ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಾಡಿನಲ್ಲಿ ಸಿಂಹವನ್ನು ಕಂಡ ಆನೆಗಳ ಹಿಂಡು ಅದಕ್ಕೆ ಪ್ರತಿಕ್ರಿಯಿಸುವ ಪರಿಯ ದೃಶ್ಯ ಇದು. ಕಾಡಿನಲ್ಲಿರುವ ಆನೆಗಳ ಹಿಂಡಿನ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ ಆ ಆನೆಗಳು ಸಿಂಹವೊಂದನ್ನು ನೋಡುತ್ತವೆ. ಇದಾದ ತಕ್ಷಣ ಇವುಗಳು ತಮ್ಮ ಬಳಗದಲ್ಲಿರುವ ಮರಿ ಆನೆಗಳ ರಕ್ಷಣೆಗೆ ಮುಂದಾಗುತ್ತವೆ. ಎಲ್ಲಾ ಮರಿಗಳನ್ನು ನಡುವಿನಲ್ಲಿ ನಿಲ್ಲಿಸಿ ಸುತ್ತಲೂ ಭದ್ರಕೋಟೆಯನ್ನು ನಿರ್ಮಿಸುವ ಆನೆಗಳ ಒಗ್ಗಟ್ಟು ನಿಜವಾಗಿಯೂ ಗಮನ ಸೆಳೆಯುತ್ತದೆ.

20 ಸೆಕೆಂಡುಗಳ ಈ ಕ್ಲಿಪ್ ಆನೆಗಳ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಸಿಂಹವನ್ನು ಕಂಡ ಕೂಡಲೇ ಆನೆಗಳು ಹೇಗೆ ವೃತ್ತವನ್ನು ನಿರ್ಮಿಸುತ್ತವೆ ಎಂಬುದನ್ನು ನೋಡುವಾಗ ಅಚ್ಚರಿಯೂ ಆಗುತ್ತದೆ. ಮೆಚ್ಚುಗೆ ಕೂಡಾ ಮೂಡುತ್ತದೆ. ಸಹಜವಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸಿದ್ದು, ಈ ದೃಶ್ಯ ಕಂಡ ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

suddiyaana