ಕಷ್ಟಪಟ್ಟು ದುಡಿಯುತ್ತಿದ್ದ ಮಗಳನ್ನೇ ಬಲಿ ಪಡೆದ ಕಾಡಾನೆ – ವಿಧಿಯ ಅಟ್ಟಹಾಸಕ್ಕೆ ಹೆತ್ತವರ ಕಣ್ಣೀರು
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ – ಬದುಕಲಿಲ್ಲ ಮಗಳು, ತಾಯಿಯ ಜೀವನ್ಮರಣ ಹೋರಾಟ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಕಾಡಾನೆಯೊಂದು ಅಟ್ಟಹಾಸ ಮೆರೆದಿದೆ. ಬೆಳಗ್ಗೆಯೇ ಗ್ರಾಮಕ್ಕೆ ಬಂದು ಏಕಾಏಕಿ ದಾಳಿ ಮಾಡಿದ ಕಾಡಾನೆ ಯುವತಿಯೊಬ್ಬಳನ್ನು ಬಲಿ ಪಡೆದಿದೆ. ಘಟನೆಯಲ್ಲಿ ಯುವತಿಯ ತಾಯಿ ಕೂಡಾ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಷ್ಟಪಟ್ಟು ಜಮೀನಿನಲ್ಲಿ ದುಡಿಯುತ್ತಿದ್ದ ತಾಯಿ ಮಗಳಿಗೆ ಕಾಡಾನೇಯೇ ಕಂಟಕವಾಗಿದ್ದು ನೋಡಿ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ತಾಂಡವ – ಒಂದೇ ದಿನ 6,050 ಹೊಸ ಪಾಸಿಟಿವ್ ಕೇಸ್, 14 ಮಂದಿ ಸಾವು
17 ವರ್ಷದ ಕವನ ತನ್ನ ತಾಯಿ ಮಂಜುಳಾ ಜೊತೆ ಎಂದಿನಂತೆ ಇವತ್ತು (ಏಪ್ರಿಲ್,8 ಶನಿವಾರ) ಕೂಡಾ ಜಮೀನಿಗೆ ಬಂದಿದ್ದಳು. ತಾಯಿಯ ಜೊತೆ ಜಮೀನಿನಲ್ಲಿ ಅವರೆಕಾಯಿ ಬಿಡಿಸುವ ಕೆಲಸದಲ್ಲಿ ನಿರತಳಾಗಿದ್ದಳು. ತಾಯಿ ಮಗಳು ಬೆಳಗ್ಗೆ ಬೇಗ ಬಂದು ಜಮೀನಿನಲ್ಲಿ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರು. ಕಷ್ಟಪಟ್ಟು ದುಡಿಯುತ್ತಿದ್ದ ತಾಯಿ ಮಗಳಿಗೆ ತಮ್ಮ ಹಿಂದೆಯೇ ಸಾವಿನ ರೂಪದಲ್ಲಿ ಕಾಡಾನೆಯೊಂದು ಕಾಯುತ್ತಿತ್ತು ಅನ್ನೋ ಅರಿವು ಕೂಡಾ ಇರಲಿಲ್ಲ. ಆದರೆ, ಮುಂಜಾನೆಯೇ ಗ್ರಾಮದಲ್ಲಿ ದಾಂಧಲೆ ನಡೆಸುತ್ತಾ ಬಂದಿದ್ದ ಕಾಡಾನೆ ಸದ್ದಿಲ್ಲದೇ ಜಮೀನಿಗೆ ನುಗ್ಗಿದೆ. ಹಿಂದೆ ಕಾಡಾನೆ ಬಂದಿದ್ದು ತಾಯಿ ಮತ್ತು ಮಗಳಿಗೆ ಗೊತ್ತೇ ಆಗಿರಲಿಲ್ಲ. ಹಿಂದೆಯಿಂದ ಬಂದ ಆನೆ ಮೊದಲು ಮಗಳ ಮೇಲೆ ದಾಳಿ ನಡೆಸಿದೆ. ನಂತರ ತಾಯಿಯ ಮೇಲೂ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಕವನ, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾಳೆ. ಕವನಳ ತಾಯಿ ಮಂಜುಳಾ ಕೂಡಾ ಗಾಯಗೊಂಡಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ವಿಧಿಯ ಅಟ್ಟಹಾಸಕ್ಕೆ ಸಾಕ್ಷಿಯಾಗಿತ್ತು.