ಚಿರತೆ, ಹುಲಿ ದಾಳಿ ಬಳಿಕ ಕಾಡಾನೆ ಅಟ್ಟಹಾಸ – ಕಡಬದಲ್ಲಿ ಇಬ್ಬರನ್ನ ಕೊಂದು ಹಾಕಿದ ಮದಗಜ

ಚಿರತೆ, ಹುಲಿ ದಾಳಿ ಬಳಿಕ ಕಾಡಾನೆ ಅಟ್ಟಹಾಸ – ಕಡಬದಲ್ಲಿ ಇಬ್ಬರನ್ನ ಕೊಂದು ಹಾಕಿದ ಮದಗಜ

ರಾಜ್ಯದಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ದಾಳಿ ಮಿತಿ ಮೀರಿದೆ. ಮೈಸೂರಿನಲ್ಲಿ ಕೆಲ ದಿನಗಳ ಹಿಂದಷ್ಟೇ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಕಳೆದ ವಾರವಷ್ಟೇ ಮಡಿಕೇರಿಯಲ್ಲಿ ತಾತ, ಮೊಮ್ಮಗನನ್ನ ಹುಲಿ ಕೊಂದು ಹಾಕಿತ್ತು. ಈ ಪ್ರಕರಣಗಳು ಹಸಿ ಹಸಿಯಾಗಿರುವಾಗಲೇ ಮಂಗಳೂರಿನಲ್ಲಿ ಕಾಡಾನೆ ಅಟ್ಟಹಾಸ ಮೆರೆದಿದೆ. ಇಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಇದನ್ನೂ ಓದಿ : ಡಿ.ರೂಪಾ ವಿರುದ್ಧ ರೊಚ್ಚಿಗೆದ್ದ ರೋಹಿಣಿ ಪತಿ & ಫ್ಯಾನ್ಸ್ – IAS Vs IPS ಕಾಳಗ ಮತ್ತಷ್ಟು ಹೆಚ್ಚಿದ್ದೇಕೆ..!?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೀನಾಡಿ ಎಂಬಲ್ಲಿ ಈ ದುರಂತ ಸಂಭವಿಸಿದೆ. ಆನೆ ದಾಳಿಯಿಂದಾಗಿ ರಂಜಿತಾ (21) ಹಾಗೂ ರಮೇಶ್ ರೈ (55) ಎಂಬುವವರು ಸಾವನ್ನಪ್ಪಿದ್ದಾರೆ. ಮೃತ ರಂಜಿತಾ ಸ್ಥಳೀಯ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವತ್ತು ಕೂಡ ಎಂದಿನಂತೆ ಮನೆಯಿಂದ ಸೊಸೈಟಿಗೆ ಹೋಗುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದೇ ವೇಳೆ ಸಮೀಪದಲ್ಲೇ ಇದ್ದ ರಮೇಶ್ ರೈ ಎಂಬುವವರ ಮೇಲೆಯೂ ಅಟ್ಯಾಕ್ ಮಾಡಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ರಂಜಿತಾ ಅವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಳೆದ ಹಲವು ದಿನಗಳಿಂದ ಕಾಡಾನೆ ಉಪಟಳದಿಂದ ಬೇಸತ್ತಿರುವ ಇಲ್ಲಿನ ಜನ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಸಾವಿಗೆ ಅಧಿಕಾರಿಗಳೇ ನೇರ ಕಾರಣ ಅಂತಾ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಇಬ್ಬರ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಘಟನಾ ಸ್ಥಳದಲ್ಲಿಯೇ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

suddiyaana