ಮುಗಿಯಿತು ಗಾಂಭೀರ್ಯದ ಪಯಣ – ಮಣ್ಣಲ್ಲಿ ಮಣ್ಣಾದ ಮಾಜಿ ಕ್ಯಾಪ್ಟನ್ ಅರ್ಜುನ
8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಸೋಮವಾರ ಮೃತಪಟ್ಟಿದ್ದಾನೆ. ಅರಣ್ಯಾಧಿಕಾರಿಗಳ ಎಡವಟ್ಟಿನಿಂದಾಗಿ ತಾಯಿ ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಅರ್ಜುನ ಬಾರದ ಲೋಕಕ್ಕೆ ತೆರಳಿದ್ದಾನೆ. ಸೌಮ್ಯ ಸ್ವಭಾವದ ಅರ್ಜುನನಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದ ದಬ್ಬಳ್ಳಿ ಕಟ್ಟೆ ಗ್ರಾಮದ ಬಳಿಯೇ ಅರ್ಜುನನ ಅಂತ್ಯಸಂಸ್ಕಾರ ನಡೆದಿದೆ.
ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಮಣ್ಣಲ್ಲಿ ಮಣ್ಣಾಗಿದ್ದಾನೆ. ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಅರ್ಜುನನ ಅಂತ್ಯಕ್ರಿಯೆ ನೆರವೇರಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಅಂತ್ಯಕ್ರಿಯೆ ನಡೆಯಿತು. ಜೆಸಿಬಿ ಸಹಾಯದಿಂದ ಅರ್ಜುನನ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನ ನೆರವೇರಿಸಲಾಯ್ತು. ಈ ವೇಳೆ ಅಲ್ಲಿ ನೆರೆದಿದ್ದವರು ಕಣ್ಣಾಲಿಗಳು ತುಂಬಿದ್ದವು. ಮಾವುತ ಹಾಗೂ ಕಾವಾಡಿಗರು ಕಣ್ಣೀರಿನಲ್ಲೇ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ: 10 ವರ್ಷದ ಸುಂದರ ಅರ್ಜುನನಾಗಿದ್ದು ಹೇಗೆ ? – ಕ್ಯಾಪ್ಟನ್ ಅರ್ಜುನ ಕನ್ನಡಿಗರ ಹೃದಯದಲ್ಲಿ ಸದಾ ಅಮರ…
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ಕೊನೆ ಗಳಿಗೆಯಲ್ಲೂ ಕಾದಾಡುತ್ತಾ ಪ್ರಾಣಬಿಟ್ಟ ಅರ್ಜುನನಿಗೆ ಸರ್ಕಾರದಿಂದ ಸಕಲ ಸರ್ಕಾರಿ ಗೌರವ ನೀಡಿ, ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಹಾಸನ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯ್ತು. ಪೊಲೀಸ್ ಇಲಾಖೆಯ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಹಾಸನ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಡಿಸಿಎಫ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಜರಿದ್ದರು.
ಕಣ್ಣೀರಿಟ್ಟ ಮಾವುತ ವಿನು
ಕೆಎಫ್‌ಡಿಸಿ ನೆಡುತೋಪಿನಲ್ಲಿ ಆನೆ ಅರ್ಜುನನ ಕಳೇಬರವನ್ನು ತಬ್ಬಿಕೊಂಡು ಮಾವುತ ರೋಧಿಸುತ್ತಿದ್ದ ದೃಶ್ಯ ಎಂಥ ಕಲ್ಲು ಹೃದಯದವರ ಕಣ್ಣನ್ನೂ ತೇವ ಮಾಡಿತ್ತು. ಅಯ್ಯೋ.. ಎದ್ದೇಳೋ ಅರ್ಜುನ.. ಎಂಥ ರಾಜನ ಮಿಸ್ ಮಾಡಿಕೊಂಡೆ. ನನ್ನ ಆನೆ ನನಗೆ ಬೇಕು, ಅವನು ಯಾರಿಗೂ ಬಗ್ಗುವನಲ್ಲ.. ಮಲಗಿದ್ದಾನೆ ಎಬ್ಬಿಸಿ, ನಮ್ಮಾನೆಯನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಬೇಕು.. ಮಕ್ಕಳು, ಹೆಂಡತಿ, ಅಪ್ಪ ಎಲ್ಲರೂ ಅಳುತ್ತಿದ್ದಾರೆ. ಇಲ್ಲಿ ಅಂತ್ಯಸಂಸ್ಕಾರಕ್ಕೆ ಮಾಡಲು ಬಿಡುವುದಿಲ್ಲ, ಇದನ್ನು ನಮ್ಮೂರಿಗೆ ತೆಗೆದುಕೊಂಡು ಹೋಗುತ್ತೇನೆ, ಎದ್ದೇಳು ರಾಜ ಎಂದು ರೋದಿಸಿದ್ದಾರೆ. ಅರ್ಜುನನ ಅಂತ್ಯಸಂಸ್ಕಾರದ ವೇಳೆಯೂ ಮಾವುತ ವಿನು ಕಣ್ಣೀರಿಟ್ಟಿದ್ದಾನೆ. ಕಣ್ಣೀರಿಡುತ್ತಲೇ ಅರ್ಜುನನ ಮೃತದೇಹ ಸುತ್ತು ಹಾಕಿದ ವಿನು, ಬಳಿಕ ಆನೆ ಬಳಿ ಕುಳಿತು ಕಣ್ಣೀರಿಟ್ಟಿದ್ದಾನೆ. ವಿನುವಿನ ದುಃಖವನ್ನು ನೋಡಿ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲಿ ನೀರು, ದುಃಖ ಮಡುಗಟ್ಟಿತ್ತು.
ಮೈಸೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ಆಗ್ರಹಿಸಿದ್ದ ಜನ
ಹಾಸನದ ಬದಲು ಮೈಸೂರಿನಲ್ಲಿ ಅರ್ಜುನನ ಅಂತ್ಯಸಂಸ್ಕಾರ ನಡೆಸಬೇಕು ಅನ್ನೋ ಆಗ್ರಹ ಕೇಳಿ ಬಂದಿತ್ತು. ಮೈಸೂರಿನ ಬಳ್ಳೆ ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲು ಮಾವುತರು ಒತ್ತಾಯಿಸಿದ್ದರು. ಸೂಕ್ತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡಲು ಜನರು ಆಗ್ರಹಿಸಿದ್ದರು. ಆದರೆ ಜನರ ಒತ್ತಾಯದ ನಡುವೆಯೇ ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯ್ತು.
ಪೊಲೀಸರಿಂದ ಲಾಠಿ ಚಾರ್ಜ್
ಇನ್ನು ಅರ್ಜುನನ ಅಂತ್ಯಕ್ರಿಯೆಗೂ ಮುನ್ನ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆಯಿತು. ಅರ್ಜುನನ ಅಂತ್ಯಸಂಸ್ಕಾರದ ವಿಚಾರವಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಅರ್ಜುನನ ದರ್ಶನಕ್ಕೆ ಹರಿದು ಬಂದ ಜನಸಾಗರ!
ಅರ್ಜುನ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಮೈಸೂರಿನಿಂದಲೂ ಬಂದು ಜನ ಅಂತಿಮ ನಮನ ಸಲ್ಲಿಸಿದ್ದರು. ಮೃತ ಅರ್ಜುನನ ಕಳೇಬರಕ್ಕೆ ಹಾರ ಹಾಕಿ ನಮನ ಸಲ್ಲಿಸಿದರು. ಅನೇಕ ಅಭಿಮಾನಿಗಳು ಕಣ್ಣೀರಿಡುತ್ತಾ ಅರ್ಜುನನಿಗೆ ಭಾವಪೂರ್ಣ ವಿದಾಯ ಹೇಳಿದರು.