ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ – ಬೀಟಮ್ಮ ಗ್ಯಾಂಗ್ ಅನ್ನು ಹೆಡೆಮುರಿಕಟ್ಟಲು ಅಭಿಮನ್ಯು ಟೀಮ್ ಎಂಟ್ರಿ!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ಆನೆಗಳ ಹಿಂಡು ಎಂಟ್ರಿಕೊಟ್ಟಿದ್ದವು. ಶಾಲಾ ಆವರಣದಲ್ಲೇ 27 ಕ್ಕೂ ಅಧಿಕ ಆನೆಗಳು ಬೀಡುಬಿಟ್ಟಿದ್ದವು. ಇದು ಈಗ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶಾಲಾ ಆವರಣದಿಂದ ಓಡಿಸಿದ್ದಾರೆ. ಆದ್ರೂ ಈ ಬೀಟಮ್ಮ ಗ್ಯಾಂಗ್ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡ ಅಖಾಡಕ್ಕಿಳಿದಿದೆ.
ಇದನ್ನೂ ಓದಿ: ‘ಮಾಲ್ಡೀವ್ಸ್ ಬಹಿಷ್ಕಾರ’ ಎಫೆಕ್ಟ್ – ಮಾಲ್ಡೀವ್ಸ್ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ
ಹೌದು, ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮದ ಆ್ಯಂಬರ್ ವ್ಯಾಲಿ ವಸತಿ ಶಾಲೆ ಆವರಣದಲ್ಲಿ ಸೋಮವಾರ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಇದು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದೀಗ ಕಾಡಾನೆಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಭಿಮನ್ಯು ಎಂಟ್ರಿಕೊಟ್ಟಿದ್ದಾನೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗ್ಯಾಂಗ್ ಕಾರ್ಯಚರಣೆ ನಡೆಯಲಿದೆ. ಅಭಿಮನ್ಯುಗೆ ಮಹೇಂದ್ರ ಸುಗ್ರೀವ, ಭೀಮ, ದುಬಾರೆ ಹಾಗೂ ನಾಗರಹೊಳೆಯಿಂದ ಆಗಮಿಸಿರುವ 8 ಕುಮ್ಕಿ ಆನೆಗಳು ಸಾಥ್ ನೀಡಲಿವೆ. ಸದ್ಯ ಅಭಿಮನ್ಯು ಮತ್ತು ತಂಡ ಮತ್ತಾವರ ಅರಣ್ಯ ಇಲಾಖೆಯ ವಸತಿ ಗೃಹದ ಆವರಣಕ್ಕೆ ಬಂದಿಳಿದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಕಾರ್ಯಚರಣೆ ಆರಂಭಗೊಳ್ಳಲಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ. ಸದ್ಯ, ಬೀಟಮ್ಮ ಗ್ಯಾಂಗ್ ಚಲನೆಯ ಮೇಲೆ ನಿಗಾ ಇಟ್ಟಿರುವ ಅರಣ್ಯ ಇಲಾಖೆಯು ಬಂದ ದಾರಿಯಲ್ಲೇ ಅವುಗಳನ್ನು ವಾಪಸ್ ಕಳಿಸಲು ಪ್ಲಾನ್ ಮಾಡಿಕೊಂಡಿದೆ. ಸದ್ಯ, ಕೆಆರ್ ಪೇಟೆ ಪೇಟೆ ಗ್ರಾಮದ ಶಾಲೆಯ ಹಿಂಭಾಗದ ಪ್ಲಾಂಟೇಶನ್ನಲ್ಲಿ 30 ಕಾಡಾನೆಗಳೊಂದಿಗೆ ಪ್ಲಾಂಟೇಶನ್ನಲ್ಲಿ ಬೀಟಮ್ಮ ಬೀಟು ಬಿಟ್ಟಿದೆ.
ಇನ್ನು ಕಾಡಾನೆ ಸಂಚಾರ ಮಾಡುವ ರಸ್ತೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. 9 ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಆದ್ದರಿಂದ ಯಾರೂ ಕೂಡ ಮನೆಗಳಿಂದ ಹೊರ ಬರದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಬರೊಬ್ಬರಿ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿಗಳು ಸೇರಿ ಕಾಡಾನೆಗಳ ಹಿಂಡನ್ನು ಮತ್ತೆ ಕಾಡಿಗಟ್ಟಲು ಪಟಾಕಿ ಸಿಡಿಸಿ ಹರಸಾಹಸ ಪಟ್ಟಿದ್ದರು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದೆ.