ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಸಾವು
ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಹಿನ್ನೆಲೆ ಶುಭಾಶಯ ಕೋರುವ ಬ್ಯಾನರ್ ಕಟ್ಟುವ ವೇಳೆ ಭೀಕರ ಅವಘಡವೊಂದು ಸಂಭವಿಸಿದೆ. ಹುಟ್ಟು ಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಭಾರಿ ಮಳೆಗೆ ತಮಿಳುನಾಡು ತತ್ತರ..! – ಮುಂದಿನ ಏಳು ದಿನ ಭಾರಿ ಮಳೆ ಸಾಧ್ಯತೆ!
ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದೆ. ಈ ಅವಘಡದಲ್ಲಿ ಗಾಯಗೊಂಡ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಅವರನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.